

ಬೀರೂರು: ಮಿತ್ರ ಸಮಾಜದ ಗಣೇಶ ಉತ್ಸವವನ್ನು ಪುರಸಭೆ, ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ನಡೆಸಲಾಗುತ್ತದೆ ಎಂದು ಪುರಸಭೆ ಸದಸ್ಯ ಬಿ.ಕೆ.ಶಶಿಧರ್ ತಿಳಿಸಿದರು.
ಪುರಸಭೆಯಲ್ಲಿ ಶುಕ್ರವಾರ ನಡೆದ ಮಿತ್ರಸಮಾಜ ಗಣಪತಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿ ವರ್ಷ ಮಿತ್ರ ಸಮಾಜದ ಗಣಪತಿ ಉತ್ಸವದಲ್ಲಿ ಪುರಸಭೆ ಸದಸ್ಯರು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಆದರೆ ಕಳೆದ ವರ್ಷ ರಾಜಬೀದಿ ಮೆರವಣಿಗೆ ಸಂದರ್ಭದಲ್ಲಿ ಏಕಪಕ್ಷೀಯವಾಗಿ ನಡೆದುಕೊಳ್ಳುವ ಜತೆಗೆ ಡಿಜೆಯಲ್ಲಿ ಪಕ್ಷದ ಹಾಡುಗಳನ್ನು ಹಾಕಿಸಿಕೊಂಡ ಅಧ್ಯಕ್ಷರು, ಸದಸ್ಯರು ನೃತ್ಯ ಮಾಡಿದರು. ಇಲ್ಲಿ ಎಲ್ಲ ಪಕ್ಷದ ಸದಸ್ಯರೂ ಇದ್ದಾರೆ. ಹಾಗಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮಿತ್ರ ಸಮಾಜದ ಗಣಪತಿ ಉತ್ಸವವನ್ನು ಪುರಸಭೆ ಸಹಯೋಗದಲ್ಲಿ ಮಾಡುವ ಬದಲು ಯಾವುದಾದರೂ ಸಂಘ ಸಂಸ್ಥೆಗಳಿಗೆ ನೀಡಿ ಅವರಾದರೂ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲಿ. ಕಳೆದ ವರ್ಷದ ಗಣಪತಿ ಉತ್ಸವದ ಆಯವ್ಯಯ ವರದಿಯನ್ನೇ ನೀಡದೆ ಹೇಗೆ ಈ ಬಾರಿ ಕಾರ್ಯಕ್ರಮಕ್ಕೆ ಮುಂದಾಗುತ್ತಿದ್ದೀರಿ ಎಂದು ಕಿಡಿಕಾರಿದರು.
ಪುರಸಭೆ ಉಪಾಧ್ಯಕ್ಷ ಹಾಗೂ ಮಿತ್ರ ಸಮಾಜ ಸಮಿತಿ ಅಧ್ಯಕ್ಷ ಎನ್.ಎಂ.ನಾಗರಾಜ್ ಮಾತನಾಡಿ, ಕಳೆದ ವರ್ಷದ ಕಾರ್ಯದ ಬಗ್ಗೆ ನನಗೂ ಅಸಮಾಧಾನವಿದೆ. ಈ ಬಾರಿ ಅಂಥ ಸನ್ನಿವೇಶಗಳು ಆಗದಂತೆ ಸಮಿತಿಗಳನ್ನು ರಚಿಸಿ ಸಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದರು.
ಪುರಸಭೆ ನೂತನ ಅಧ್ಯಕ್ಷೆ ವನಿತಾ, ಸದಸ್ಯರಾದ ಲೋಕೇಶಪ್ಪ, ಭಾಗ್ಯಲಕ್ಷ್ಮೀ, ಸುಮಿತ್ರಾ, ಲಕ್ಷ್ಮಣ್ ಮತ್ತು ಮಿತ್ರಸಮಾಜ ಸಮಿತಿಯ ಬಸವರಾಜ್, ಸ್ಥಳೀಯರಾದ ಸಂತೋಷ್‌ಕುಮಾರ್, ವಿನಾಯಕ್, ರುದ್ರೇಶ್, ಬಾವಿಮನೆ ಮಧು, ರುದ್ರಪ್ಪ ಇದ್ದರು.