

ಶಿಗ್ಗಾಂವಿ: ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಇ- ಸ್ವತ್ತು ಸಮಸ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಕೆಲಸಕ್ಕಾಗಿ ಗ್ರಾಪಂಗಳಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ದರಪಟ್ಟಿ ರೂಪದಲ್ಲಿ ನಮೂದಿಸಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡದೆ ನಿಗದಿತ ಸಮಯದಲ್ಲಿ ಕೆಲಸ ನಿರ್ವಹಿಸಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗುರುವಾರ ಸಾರ್ವಜನಿಕರ ಕುಂದುಕೊರತೆ, ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಇ-ಸ್ವತ್ತುಗಾಗಿ ಹುಲಗೂರ ಗ್ರಾಮ ಪಂಚಾಯಿತಿಗೆ ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದು, ಇದುವರೆಗೆ ಕ್ರಮಕೈಗೊಳ್ಳದ ಬಗ್ಗೆ ಹನುಮಂತಪ್ಪ ಕರೆಣ್ಣನವರ ಎಂಬುವವರು ಸಲ್ಲಿಸಿದ ದೂರು ಕುರಿತು ಪ್ರತಿಕ್ರಿಯಿಸಿದರು. ರಾಜ್ಯ ಲೋಕಾಯುಕ್ತ ಆಯುಕ್ತರು ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಭೇಟಿಯ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಕುಡಿಯುವ ನೀರು, ಜಯನಗರದಲ್ಲಿನ ಕೊಳಚೆ ಸಮಸ್ಯೆ ಕುರಿತು ತಲಾ ಒಂದು ಅರ್ಜಿ, ಖಾತೆ ಬದಲಾವಣೆ, ಕಸ ವಿಲೆವಾರಿ, ಬೆಳೆ ಹಾನಿಗೆ ಸಂಬಂಧಿಸಿದಂತೆ ತಲಾ ಎರಡು ಅರ್ಜಿ, ಆಶ್ರಯ ಮನೆ ಅವ್ಯವಸ್ಥೆ ಬಗ್ಗೆ ಐದು ಸೇರಿ ಒಟ್ಟು 16 ಅರ್ಜಿಗಳು ಸ್ವೀಕೃತಗೊಂಡವು. ಸ್ಥಳೀಯವಾಗಿ ಪರಿಹಾರವಾಗಬೇಕಿದ್ದ ಕೆಲ ಅರ್ಜಿಗಳ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮುಸ್ತಾಕ್ ಅಹ್ಮದ್ ಹಾಗೂ ದಾದಾವಲಿ ಕೆ.ಎಚ್., ತಹಸೀಲ್ದಾರ್ ಧನಂಜಯ ಎಂ., ತಾಪಂ ಇಒ ಕುಮಾರ ಸಭೆಯಲ್ಲಿದ್ದರು .
ವಿಜಯವಾಣಿ ವರದಿ ಪ್ರಸ್ತಾಪ
ಎರಡು ತಿಂಗಳ ಹಿಂದೆ ‘ವಿಜಯವಾಣಿ’ಯಲ್ಲಿ ತಾಲೂಕಿನ ಹಿರೇಮಲ್ಲೂರ ಗ್ರಾಪಂ ವ್ಯಾಪ್ತಿಯ ಹಿರೇಮಲ್ಲೂರ ಫ್ಲಾಟ್ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕ ಕುರಿತು ವಿಶೇಷ ವರದಿ ಪ್ರಕಟಿಸಲಾಗಿತ್ತು. ಗ್ರಾಮದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಸಮಸ್ಯೆ ಉಂಟಾಗಿದ್ದರೂ ಸ್ಥಳೀಯ ಗ್ರಾಪಂ ಅಧಿಕಾರಿಗಳು ಮತ್ತು ತಾಲೂಕಾಡಳಿತದ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಶಂಕರಗೌಡ ಪಾಟೀಲ ಪತ್ರಿಕೆಯಲ್ಲಿ ಪ್ರಕಟಿತ ವರದಿಯೊಂದಿಗೆ ದೂರು ನೀಡಿದರು. ಆಗ ಲೋಕಾಯುಕ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು 48 ಗಂಟೆಗಳ ಗಡುವು ನೀಡಿ, ನೀರಿನ ಸಮಸ್ಯೆ ಮತ್ತು ಶುದ್ಧ ನೀರಿನ ಘಟಕ ದುರಸ್ತಿಗೊಳಿಸಿ ವರದಿ ಒಪ್ಪಿಸಬೇಕು ಎಂದು ಸೂಚನೆ ನೀಡಿದರು.