ರೈತರು ಸರ್ಕಾರದ ಯೋಜನೆ ಬಳಸಿಕೊಳ್ಳಲಿ

23
Published on

ಮೈಸೂರು: ರೈತರು ಸರ್ಕಾರದ ಈ ಯೋಜನೆಗಳ ಲಾಭ ಪಡೆದುಕೊಂಡು ಒಳ್ಳೆ ಬೆಳೆ ಬೆಳೆದು ತಮ್ಮ ಆರ್ಥಿಕ ಮಟ್ಟ ಸುಧಾರಣೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ್ ಸಲಹೆ ನೀಡಿದರು.

ವಿಶ್ವ ರೈತ ದಿನಾಚರಣೆ ಅಂಗವಾಗಿ ಪುರಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರೈತ ಬಣ ಹಾಗೂ ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟ ಶನಿವಾರ ಆಯೋಜಿಸಿದ್ದ ಬೃಹತ್ ರೈತ ಜಾಥಾ ಹಾಗೂ ಹಿರಿಯ ರೈತ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಸರ್ಕಾರ ಕೃಷಿ ಭಾಗ್ಯ ಯೋಜನೆ ಅಡಿ ಶೇ.80ರಿಂದ 90ರಷ್ಟು ರಿಯಾಯಿತಿ ದರದಲ್ಲಿ ಹನಿ ನೀರಾವರಿ, ಕೃಷಿ ಹೊಂಡ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ರೈತ ಮನುಕುಲದ ಅನ್ನದಾತ. ಮಳೆ ಇರಲಿ, ಬಿಸಿಲಿರಲಿ ಆತ ತನ್ನ ಕೆಲಸವನ್ನು ಮಾತ್ರ ನಿಲ್ಲಿಸುವುದಿಲ್ಲ. ರೈತ ಕೈಕಟ್ಟಿ ಕುಳಿತರೆ ಇಡೀ ಪ್ರಪಂಚವೇ ಹಸಿವಿನಿಂದ ಬಳಲಬೇಕಾಗುತ್ತದೆ ಎಂದರು.

ನಾಲ್ಕೈದು ದಶಕಗಳ ಹಿಂದೆ ದೇಶದಲ್ಲಿ ತಿನ್ನುವ ಅನ್ನಕ್ಕೆ ಬರ ಇತ್ತು. ಆದರೆ, ಇಂದು ಅಂತಹ ವಾತಾವರಣ ಇಲ್ಲ. ಯಾರೂ ಹಸಿವಿನಿಂದ ಸಾಯುತ್ತಿರುವ ನಿದರ್ಶನಗಳಿಲ್ಲ. ಇದಕ್ಕೆಲ್ಲ ರೈತ ಹಾಗೂ ರೈತನ ಪರಿಶ್ರಮ ಕಾರಣ. ಹೀಗಾಗಿ ಜನರು ಮೂರು ಹೊತ್ತು ಊಟ ಮಾಡುವಾಗ ರೈತರನ್ನು ಸ್ಮರಿಸಬೇಕು ಎಂದರು.

ರೈತ ಮುಖಂಡ ಬೀರಪ್ಪ ದೇಶನೂರು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ವಕೀಲ ಭೀಮಪ್ಪ, ಬಸವನ ಗೌಡ ಪಾಟೀಲ್ ಇತರರಿದ್ದರು. ಇದಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಪುರಭವನದ ವರೆಗೆ ನಡೆದ ಎತ್ತಿನಗಾಡಿ ಮೆರವಣಿಗೆ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net