

ಲೋಕಾಪುರ: ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆ ಅತಿ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದೆ ಎಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷ ಸಂಜೀವ ತಳೇವಾಡ ಹೇಳಿದರು.
ಸಮೀಪದ ಚಿಕ್ಕೂರ ಗ್ರಾಮದಲ್ಲಿ ಗುರುವಾರ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶೇಖರಣೆ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಭಾಗದ ಜನರ ಬಹುವರ್ಷಗಳ ಕನಸು ಈಡೇರಿದಂತಾಗಿದೆ. ಸಣ್ಣ ರೈತರಿಗೆ ಹಾಲು ಉತ್ಪಾದನೆ ಭದ್ರತೆ ಒದಗಿಸುತ್ತದೆ. ಸರ್ಕಾರದ ವಿವಿಧ ಯೋಜನೆಗಳಲ್ಲಿ ತರಬೇತಿ ನೀಡುತ್ತಿದೆಯಲ್ಲದೆ, ಹಸು ಕೊಂಡುಕೊಳ್ಳಲು ಸಹ ಸಂಘದಿಂದ ರಿಯಾಯಿತಿ ನೀಡಲಾಗುತ್ತಿದೆ ಎಂದರು.
ವಿಮುಲ್ ಹಾಲು ಒಕ್ಕೂಟದ ನಾಮನಿರ್ದೇಶಕ ಲಕ್ಷ್ಮಣ ಮಾಲಗಿ ಮಾತನಾಡಿ, ಉತ್ತಮ ರಾಸುಗಳನ್ನು ಕೊಂಡುಕೊಂಡು ಹುಲ್ಲುಗದ್ದೆ ಬೆಳೆದು ಹಸುವಿಗೆ ನೀಡಬೇಕು. ಹಸುಗಳ ಹಾಲನ್ನು ನಮ್ಮ ಒಕ್ಕೂಟಗಳ ಡೇರಿಗಳಿಗೆ ನೀಡಿ ಸಂಘದ ಸದಸ್ಯರಾಗುವ ಜತೆಗೆ ಆರ್ಥಿಕ ವಲಯದಲ್ಲಿನ ವಿವಿಧ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿಮುಲ್ ವ್ಯವಸ್ಥಾಪಕ ಡಾ. ಗಜರಾಜ ರಣ್ಣತೂರ, ಉಪವ್ಯವಸ್ಥಾಪಕ ಡಾ. ವಿ.ಆರ್. ಯಡಹಳ್ಳಿ, ಗ್ರಾಮಸ್ಥರಾದ ವೈ.ಜಿ. ದಾಸರಡ್ಡಿ, ವಿಸ್ತರಣಾಧಿಕಾರಿ ಪಿ.ಆರ್. ಜಾಧವ, ಚಿಕ್ಕೂರ ಗ್ರಾಮದ ರೈತರು ಇದ್ದರು.