

ಅಮೀನಗಡ: ನಮ್ಮದೆಂಬ ಭಾವನೆಯಿಂದ ರೈತರು ವ್ಯವಹರಿಸಿ ಸಹಕರಿಸಿದಾಗ ಮಾತ್ರ ಯಾವುದೇ ಸಂಘ ಬೆಳೆಯಲು ಸಾಧ್ಯ ಎಂದು ಪಿಕೆಪಿಎಸ್ ಅಧ್ಯಕ್ಷ ಸಿದ್ದು ಭದ್ರಶೆಟ್ಟಿ ಹೇಳಿದರು.
ಪಟ್ಟಣದ ಶಿವಾಚಾರ್ಯ ದೇವಾಂಗ ಸಮಾಜದ ಶ್ರೀ ಬನಶಂಕರಿದೇವಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಪ್ರಗತಿಗೆ ಪಿಕೆಪಿಎಸ್ ಸಂಘಗಳು ಸಾಕಷ್ಟು ನೆರವು ನೀಡುತ್ತಿದ್ದು, ರೈತರು ಅವುಗಳ ಪ್ರಯೋಜನ ಪಡೆದು ಸಕಾಲಕ್ಕೆ ಸಾಲ ಪಾವತಿಸಬೇಕು ಎಂದರು.
ಪಿಕೆಪಿಎಸ್ ಮುಖ್ಯಕಾರ್ಯ ನಿರ್ವಾಹಕ ಎನ್.ಬಿ. ರಾಮಬಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಗೊಬ್ಬರ, ಬೀಜ, ಟ್ರಾೃಕ್ಟರ್ ಮತ್ತಿತರ ಸಾಲ ನೀಡಲಾಗುತ್ತಿದೆ. ಸಂಘಗಳಿಂದ ನಿರಂತರ ವ್ಯವಹಾರ ನಡೆದಲ್ಲಿ ರೈತರ ಅಭ್ಯುದಯ ಹಾಗೂ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಕಾರಣವಾಗಲಿದೆ ಎಂದರು.
ಪಿಕೆಪಿಎಸ್ ಉಪಾಧ್ಯಕ್ಷ ಮೈಲಾರಪ್ಪ ನರಿ, ನಿರ್ದೇಶಕರಾದ ಬಸವರಾಜ ನರಿ, ಲೋಹಿತ ರಕ್ಕಸಗಿ, ಚಂದ್ರಕಾಂತ ಚೌಕಿಮಠ, ಸಂಗಪ್ಪ ಕತ್ತಿ, ಚಂದ್ರಕಾಂತ ಸಂಗಟಿ, ಹುಸೇನಸಾಬ ಬಾಗೇವಾಡಿ, ಹುಲ್ಲಪ್ಪ ತಳವಾರ, ಪಂಪವ್ವ ಯಡಪ್ಪನವರ, ಶಿವವ್ವ ರಾಮಥಾಳ, ತಾಯಪ್ಪ ಹುಗಿನಾಳ, ಸಿಬ್ಬಂದಿ ಎಂ.ಎಂ. ಗುಗ್ಗರಿ, ಎಂ.ಎಸ್. ಅಂಬಲಗಿ, ಎನ್.ವಿ. ಕಮ್ಮಾರ, ಬಿ.ಬಿ. ನಿಡಗುಂದಿ ಇತರರಿದ್ದರು.