ರೈತರು ಸ್ವಾವಲಂಬನೆಯತ್ತ ಮುನ್ನಡೆಯಲಿ

Let the farmers move towards self-reliance
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಕೃಷಿಮಿತ್ರ ಸಹಕಾರ ಸಂಘದ ಕಚೇರಿಯನ್ನು ಕುಂಟೋಜಿ ಸಂಸ್ಥಾನ ಹಿರೇಮಠದ ಚೆನ್ನವೀರ ದೇವರು ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಉದ್ಘಾಟಿಸಿದರು. ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಉದ್ಯಮಿ ಶರಣು ಸಜ್ಜನ, ಸಂಘದ ಅಧ್ಯಕ್ಷ ಭೀಮಸಿ ಹೂಗಾರ ಇದ್ದರು.
Published on

ಮುದ್ದೇಬಿಹಾಳ: ರೈತರು ಈ ದೇಶದ ಬೆನ್ನೆಲುಬು ಎನ್ನುತ್ತೇವೆ. ಯಾವಾಗ ರೈತ ನೇರವಾಗಿ ಮಾರುಕಟ್ಟೆಗೆ ಹೋಗುವ ಬದಲು ಮಾರುಕಟ್ಟೆಯನ್ನೇ ತನ್ನೆಡೆಗೆ ಬರುವಂತೆ ಮಾಡುತ್ತಾನೋ ಆಗ ಆತ ಕೋಟ್ಯಾಧೀಶ. ನಕಾರಾತ್ಮವಾಗಿ ಮಾತನಾಡುವುದನ್ನು ಬಿಟ್ಟು ನಮ್ಮ ರೈತರು ಸ್ವಾವಲಂಬನೆ ಸಾಧಿಸಲು ಆಗಬೇಕಿರುವ ಯೋಜನೆಗಳನ್ನು ಚಿಂತಿಸಿ ಅನುಷ್ಠಾನಗೊಳಿಸುವ ಕಾರ್ಯ ಆಗಬೇಕು ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ. ಚೆನ್ನವೀರ ದೇವರು ಹೇಳಿದರು.

ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃಷಿಮಿತ್ರ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ಭಾಗದ ರೈತರು ಸಾಲಮನ್ನಾ ಮಾಡುವುದರ ಮುಖ ನೋಡದೇ ಸ್ವಾವಲಂಬನೆ ಸಾಧಿಸುವತ್ತ ಯೋಚಿಸಬೇಕು. 64 ವಿದ್ಯೆಗಳಲ್ಲಿ ಶ್ರೇಷ್ಠ ವಿದ್ಯೆ ಎಂದು ಒಕ್ಕಲುತನವನ್ನು ಕರೆಯುತ್ತಾರೆ. ಆದರೂ ರೈತರ ಮಕ್ಕಳಿಗೆ ಕನ್ಯಾ ಕೊಡುವುದಕ್ಕೆ ಸಮಾಜ ಹಿಂದೆ ಮುಂದೆ ನೋಡುತ್ತಿರುವುದು ವಿಪರ್ಯಾಸದ ಸಂಗತಿ. ಮಹಾರಾಷ್ಟ್ರದ ರೈತರು ಜಾಣರು.ಟೊಮ್ಯಾಟೊ, ಮೆಣಸಿಣಕಾಯಿ, ಬೆಳ್ಳುಳ್ಳಿ ಸೇರಿದಂತೆ ಇತರೆ ತರಕಾರಿ, ಬೆಳೆಗಳ ದರ ಕುಸಿದಾಗ ಅದನ್ನು ನಮ್ಮ ರೈತರಂತೆ ರಸ್ತೆಗೆ ಸುರಿಯದೇ ಬೇರೊಂದು ಉತ್ಪನ್ನವಾಗಿ ರೂಪಿಸಿ ಮಾರಾಟ ಮಾಡಿ ಆದಾಯ ಗಳಿಸುತ್ತಾರೆ. ಅಂತಹ ಕೌಶಲ ನಮ್ಮ ರೈತರಲ್ಲೂ ಬರಬೇಕಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಸಹಕಾರ ಸಂಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.

ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿ, ಬ್ಯಾಂಕಿಗೆ ಶೇರುದಾರರು, ಠೇವಣಿದಾರರೇ ಮಾಲೀಕರು. ಆಡಳಿತ ಮಂಡಳಿಯವರು, ಸಹಕಾರ ಸಂಘದವರು ಮಧ್ಯವರ್ತಿಯಾಗಿ ಕೆಲಸ ಮಾಡಿಕೊಂಡು ಹೋಗುವ ವ್ಯವಸ್ಥೆಯಿದೆ. ಸಹಕಾರ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯವರೇ ಸುಪ್ರೀಂ ಅಲ್ಲ ಎಂದರು.

ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಳೇಶ ಗಡೇದ, ಕೃಷಿಮಿತ್ರ ಸಹಕಾರಿ ಸಂಘದ ಅಧ್ಯಕ್ಷ ಭೀಮಸಿ ಹೂಗಾರ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಗಿರಿಜಾ ಕಡಿ, ಸರೋಜಾ ಕೋರಿ, ಬ.ಬಾಗೇವಾಡಿ ವೈದ್ಯಾಧಿಕಾರಿ ಡಾ. ಬಿ.ವೈ. ಮುತ್ತತ್ತಿ, ಡಾ. ಎಚ್.ಎಂ. ನಾಟೇಕಾರ ಮಾತನಾಡಿದರು.

ಉದ್ಯಮಿ ಶರಣು ಸಜ್ಜನ, ಎಚ್.ಟಿ. ಬಿರಾದಾರ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎಲ್.ಎಚ್. ರಾಠೋಡ, ಸಂಘದ ಉಪಾಧ್ಯಕ್ಷ ತಿಪ್ಪಣ್ಣ ರಾಮೋಡಗಿ, ಯಶಸ್ವಿನಿ ಮಹಿಳಾ ಸಂಘದ ಅಧ್ಯಕ್ಷೆ ಸಿದ್ದಮ್ಮ ಒಣರೊಟ್ಟಿ, ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, ಬಸಯ್ಯ ಮಠ, ಶರಣು ಬಳೂತಿ, ಮಹ್ಮದರಫೀಕ ನಾಡಗೇರ, ಬಸಲಿಂಗಪ್ಪ ಹೂಗಾರ ಇದ್ದರು.


ಸಾಕ್ಷಿ ಹತ್ತಿ ಹಾಗೂ ಬಸಮ್ಮ ಹಿರೇಮಠ ಪ್ರಾರ್ಥಿಸಿದರು. ಎಸ್.ಎಸ್. ಮಾಗಿ ಸ್ವಾಗತಿಸಿದರು. ಸಿದ್ದು ಹೆಬ್ಬಾಳ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net