

ಬಸವನಬಾಗೇವಾಡಿ: ರೈತರು ಕೃಷಿಯೊಂದಿಗೆ ಹೈನುಗಾರಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದಾಗಿದೆ ಎಂದು ಕಬ್ಬು ಅಭಿವೃದ್ಧಿ ಸಕ್ಕರೆ ಜವಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ, ವಿಜಯಪುರ ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮಣ್ಣೂರದಲ್ಲಿ ಶನಿವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಕೃಷಿಯಿಂದ ಅಧಿಕ ಪ್ರಮಾಣದ ಬೆಳೆ ಬೆಳೆಯಲು ಸಾಧ್ಯ. ತಾಲೂಕಿನ ನಿಡಗುಂದಿಯಲ್ಲಿ ಓರ್ವ ರೈತ ಒಂದು ಎಕರೆ ಜಮೀನಿನಲ್ಲಿ ವೈಜ್ಞಾನಿಕ ಕೃಷಿ ಮಾಡಿ 1.20 ಟನ್ ಕಬ್ಬು ಬೆಳೆದಿದ್ದಾರೆ. ರೈತರು ಒಂದೇ ಬೆಳೆ ಬೆಳೆಯುವ ಬದಲು ವೈಜ್ಞಾನಿಕ ಬೆಳೆ ಪದ್ಧತಿ ಅನುಸರಿಸಬೇಕು. ಕಬ್ಬು ಬೆಳೆಯನ್ನು 12 ತಿಂಗಳಿಂದ 16 ತಿಂಗಳಾದ ಮೇಲೆ ಕಟಾವು ಮಾಡಿದರೆ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆಯಲ್ಲದೆ ಕಾರ್ಖಾನೆಗಳು ಹೆಚ್ಚಿನ ಬೆಲೆಗೆ ಖರೀದಿಸುತ್ತವೆ ಎಂದರು.
ವಿಜಯಪುರ ಜಿಲ್ಲೆಯ ಟಕ್ಕಳಕಿಯಲ್ಲಿ ರೈತ ಮಹಿಳೆಯರು ನಿತ್ಯ 2 ಸಾವಿರ ಲೀಟರ್ ಹಾಲು ಉತ್ಪಾದಿಸುತ್ತಾರೆ. ಅವರಿಗೆ ಸರ್ಕಾರದಿಂದ 500 ರೂ. ಧನ ಸಹಾಯವೂ ದೊರೆಯುತ್ತಿದೆ. ಲೀಟರ್ ಹಾಲಿಗೆ 30 ರಿಂದ 40 ರೂ. ಸಿಗುತ್ತದೆ. ರಾಜ್ಯದಲ್ಲಿ ನಿತ್ಯ 90 ಸಾವಿರಕ್ಕೂ ಅಧಿಕ ಹಾಲನ್ನು ರೈತರು ಉತ್ಪಾದಿಸುತ್ತಿದ್ದಾರೆ ಎಂದು ತಿಳಿಸಿದರು.
ಒಂದು ಕಾಲದಲ್ಲಿ ರೈತರಿಗೆ 37 ಸಾವಿರ ರೂ. ಸಾಲ ನೀಡುತ್ತಿದ್ದ ವಿಜಯಪುರ, ಬಾಗಲಕೋಟೆ ಡಿ.ಸಿ.ಸಿ ಬ್ಯಾಂಕ್ ಇಂದು 4.50 ಕೋಟಿ ರೂ. ಸಾಲ ನೀಡುತ್ತಿದೆ. ಒಬ್ಬ ರೈತನಿಗೆ ಕನಿಷ್ಠ 70 ಸಾವಿರದಿಂದ ಗರಿಷ್ಠ 3 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತಿದೆ. 63 ಸಾವಿರದಿಂದ ಪ್ರಾರಂಭವಾದ ಡಿಸಿಸಿ ಬ್ಯಾಂಕ್ ಇಂದು 12 ಸಾವಿರ ಕೋಟಿ ವೈಹಿವಾಟು ನಡೆಸುತ್ತಿದೆ ಎಂದರು.
ಆಲಮಟ್ಟಿ ಅಣೆಕಟ್ಟಿನ ಕೃಷ್ಣಾ ನದಿ ನೀರಿನ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿದ್ದರಿಂದಾಗಿ ಜಿಲ್ಲೆಯ ಸಮಗ್ರ ನೀರಾವರಿಗೆ ತೊಂದರೆಯಾಗುತ್ತಿದೆ. ವ್ಯಾಜ್ಯ ಮುಗಿದ ತಕ್ಷಣ ಜಿಲ್ಲೆ ಸಂಪೂರ್ಣ ನೀರಾವರಿಯಾಗಲಿದೆ. ಈಗಾಗಲೇ ರೈತರು, ಸಾರ್ವಜನಿಕರಿಗೆ ಕುಡಿಯುವ ನೀರು ನಿವಾರಣೆಗಾಗಿ ಎಲ್ಲ ಕೆರೆಗಳನ್ನು ಎರಡೆರಡು ಬಾರಿ ನೀರು ತುಂಬಿಸಲಾಗುತ್ತಿದೆ ಎಂದರು.
ಅವಳಿ ಜಿಲ್ಲೆಯಲ್ಲಿ ಐದು ನದಿಗಳಿದ್ದರೂ ಎರಡು ವರ್ಷಕ್ಕೊಮ್ಮೆಯಾದರೂ ರೈತರು ಬರ ಅನುಭವಿಸುವಂತಾಗಿದೆ. ರಾಜ್ಯದಲ್ಲಿ 3 ಜನ ಮುಖ್ಯಮಂತ್ರಿಗಳು ಜಿಲ್ಲೆಯ ರೈತರ 3.50 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 272 ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳಿದ್ದು, ಅದರಲ್ಲಿ 251 ಸಂಘಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆಲ್ಲ ಸಂಘದ ಸರ್ವ ಸದಸ್ಯರು ಹಾಗೂ ರೈತರ ಸಹಕಾರವೇ ಕಾರಣವಾಗಿದೆ ಎಂದರು.
ಸಹಕಾರ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ, ಬಿ.ಕೆ. ಕಲ್ಲೂರ, ಸಂಗನಗೌಡ ಚಿಕ್ಕೊಂಡ ಮಾತನಾಡಿದರು.
ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಜೈನಾಪುರದ ಸಂಗಯ್ಯ ಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಬಸಪ್ಪ ಕಾರಜೋಳ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಹಾರಿವಾಳ, ಜಗದೀಶ ಕೊಟ್ರಶೆಟ್ಟಿ, ನೀಲು ನಾಯಕ, ಕಲ್ಲು ಸೊನ್ನದ, ಪಿ.ವೈ. ಡೆಂಗಿ, ಎಸ್ .ಎಂ. ಹಂಗರಗಿ, ಎಸ್.ಬಿ. ಹೊಸಮನಿ, ಜಿ.ಎ. ಈಳಗೇರ, ಯಲ್ಲಪ್ಪ ತಳೆವಾಡ, ಶಂಕರ ಜುಗತಿ, ಸಿದ್ದಣ್ಣ ಜುಗತಿ ಇತರರಿದ್ದರು.
ಶಿಕ್ಷಕ ವೈ.ಸಿ. ಕಾರಜೋಳ ಸ್ವಾಗತಿಸಿದರು. ಶಿಕ್ಷಕ ಎಚ್.ಬಿ. ಬಾರಿಕಾಯಿ ನಿರೂಪಿಸಿದರು. ಸಂಘದ ಸಿ.ಒ. ಬಸವರಾಜ ಹೆಬ್ಬಾಳ ವಂದಿಸಿದರು.