

ಆಲಮಟ್ಟಿ:ಜಾತ್ರೆಗಳು ದೇಶದಲ್ಲಿ ಸಾಮರಸ್ಯ ಸಾರುವ ಕೇಂದ್ರಗಳು ಎಂದು ಸಕ್ಕರೆ, ಕಬ್ಬು ಅಭಿವೃದ್ಧಿ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸ್ಥಳೀಯ ಅನ್ನದಾನೇಶ್ವರ ಪುರವರ ಹಿರೇಮಠದ ಜಾತ್ರೆ ನಿಮಿತ್ತ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಲಮಟ್ಟಿಯ ಪುರವರ ಹಿರೇಮಠದ ದೇವಸ್ಥಾನ ನಿರ್ಮಾಣಕ್ಕೆ ನಾನೂ ಕೈಜೋಡಿಸುವೆ ಎಂದರು.
ಉತ್ತರ ಕರ್ನಾಟಕದಲ್ಲಿ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಗೆ ಅಪಾರ ಪ್ರಮಾಣದಲ್ಲಿ ಭಕ್ತರು ಸೇರುತ್ತಾರೆ. ಹೀಗೆ ಈ ಭಾಗದಲ್ಲಿ ನಡೆಯುವ ಜಾತ್ರೆಗಳು ಅದೇ ರೀತಿಯಲ್ಲಿ ಶಿಸ್ತುಬದ್ಧವಾಗಿ ನಡೆಯಬೇಕು ಎಂದು ಆಶಿಸಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಜಾತ್ರೆಗಳು ಭಕ್ತರನ್ನು ಒಂದುಗೂಡಿಸುವ ಶ್ರದ್ಧಾಕೇಂದ್ರಗಳಾಗಿವೆ. ದೇಶದ ಮೇಲೆ ನರಿ ಬುದ್ಧಿಯ ಪಾಕಿಸ್ತಾನವು ನಮ್ಮ 26 ಜನರನ್ನು ಹತ್ಯೆ ಮಾಡಿದ್ದಾರೆ. ಇದಕ್ಕೆ ಉತ್ತರವಾಗಿ ದೇಶದ 140 ಕೋಟಿ ಭಾರತೀಯರ ಬೆಂಬಲದಿಂದ ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡಿವೆ. ಧಾರ್ಮಿಕ ಕೇಂದ್ರಗಳು ಅಭಿವೃದ್ಧಿ ಆಗಬೇಕಾದರೆ ಭಕ್ತರ ನೆರವು ಅಗತ್ಯವಾಗಿದೆ ಎಂದು ತಿಳಿಸಿದರು.
ಶ್ರೀ ಮಠದ ಪೀಠಾಧಿಪತಿ ರುದ್ರಮುನಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ವಿವಿಧ ಮಠಾಧೀಶರು ಆಶೀರ್ವಚನ ನೀಡಿದರು.
ನಿಡಗುಂದಿ ರುದ್ರಮುನಿ ಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಸ್ವಾಮೀಜಿ ಕೊಣ್ಣೂರಿನ ಡಾ. ವಿಶ್ವಪ್ರಭು ಸ್ವಾಮೀಜಿ, ಚಿಮ್ಮಲಗಿಯ ಸಿದ್ದರೇಣುಕ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ, ಹುನಗುಂದದ ಅಮರೇಶ್ವರ ದೇವರು, ಚುಂಚನಹಳ್ಳಿಯ ಚನ್ನಬಸವ ಸ್ವಾಮೀಜಿ, ಬೀಳಗಿಯ ಗುರುಪಾದ ಸ್ವಾಮೀಜಿ, ನಂದವಾಡಗಿಯ ಅಭಿನವ ಚನ್ನಬಸವ ಸ್ವಾಮೀಜಿ, ಕುಂದರಗಿಯ ವೀರಸಂಗಮೇಶ್ವರ ಸ್ವಾಮೀಜಿ ಹಾಗೂ ಭರತರಾಜ ದೇಶಮುಖ, ಗ್ರಾಪಂ ಅಧ್ಯಕ್ಷೆ ಕವಿತಾ ಬಡಿಗೇರ, ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ನಿವೃತ್ತ ಆಯುಕ್ತ ಪ್ರಕಾಶ ಚಿನಿವಾಲರ, ವಿಶ್ರಾಂತ ನ್ಯಾಯಾಧೀಶ ರಾಚಪ್ಪ ಚಿನಿವಾಲರ, ಚಾಣಾಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ ಎನ್.ಎಂ. ಬಿರಾದಾರ ಇತರರಿದ್ದರು.