

ಮೈಸೂರು: ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಅವರ ಕುಟುಂಬದವರಿಗೆ ಸರ್ಕಾರದ ವಿಶೇಷ ಸೌಲಭ್ಯಗಳ ವಿತರಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು ಸೂಚಿಸಿದರು.
ಆತ್ಮಹತ್ಯೆಗೆ ಒಳಗಾದ ಕುಟುಂಬದ ಸದಸ್ಯರಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಸೌಲಭ್ಯಗಳ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರ್ಹ ರೈತರ ಕುಟುಂಬಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತ್ವರಿತವಾಗಿ ದೊರಕಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಯಾವುದೇ ವಿಳಂಬ ಮಾಡದೆ ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಸರ್ಕಾರದ ವಿಶೇಷ ಸೌಲಭ್ಯಗಳ ಕುರಿತ ಸ್ಪಂದನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಇನ್ನು ಮುಂದೆ ಪ್ರತಿ ತಿಂಗಳ ಮೊದಲ ಸೋಮವಾರ ನಿಯಮಿತವಾಗಿ ಉಸ್ತುವಾರಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
53 ಪ್ರಕರಣ ವರದಿ:
ಜಿಲ್ಲೆಯಲ್ಲಿ ಒಟ್ಟು 53 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, 42 ಪ್ರಕರಣಗಳು ಅರ್ಹ ಪ್ರಕರಣಗಳಲ್ಲಿ ಮೂರು ಪ್ರಕರಣಗಳಲ್ಲಿ ಎಫ್‌ಎಸ್‌ಎಲ್ ವರದಿ ಬಾಕಿ ಇದೆ. ಎರಡು ಪ್ರಕರಣಗಳಲ್ಲಿ ಇತರ ದಾಖಲಾತಿಗಳು ಬಾಕಿ ಇದ್ದು, ಬಾಕಿ ಇರುವ ಪ್ರಕರಣಗಳ ಕುರಿತು ತುರ್ತಾಗಿ ಕ್ರಮವಹಿಸಲು ಪೊಲೀಸ್ ಇಲಾಖೆ ಮುಂದಾಗಬೇಕು. ವಿಶೇಷ ಆರೋಗ್ಯ ಚಿಕಿತ್ಸಾ ಸೌಲಭ್ಯಗಳನ್ನು ದೊರಕಿಸುವ ಸಲುವಾಗಿ ಬಾಕಿ ಇರುವ 16 ಕುಟುಂಬಗಳಿಗೆ ಆರೋಗ್ಯ ಇಲಾಖೆಯಿಂದ ಕಾರ್ಡ್‌ಗಳನ್ನು ಶೀಘ್ರವಾಗಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಾಲ್ಕು ಗಂಟೆಯೊಳಗೆ ಕ್ಷೇತ್ರ ಭೇಟಿ:
ರೈತರ ಆತ್ಮಹತ್ಯೆ ಪ್ರಕರಣಗಳ ವರದಿಯಾದರೆ 4 ಗಂಟೆಯೊಳಗಾಗಿ ಸಂಬಂಧಿಸಿದ ಇಲಾಖೆಗಳು ಕ್ಷೇತ್ರ ಭೇಟಿ ನೀಡಿ ವರದಿ ಸಲ್ಲಿಸಲು ಅಗತ್ಯ ಕ್ರಮ ವಹಿಸಬೇಕು. ಶಿಕ್ಷಣ ಇಲಾಖೆಯಿಂದ ಲಭ್ಯವಿರುವ ಸೌಲಭ್ಯಗಳನ್ನು ಯಾವುದೇ ವಿಳಂಬ ಮಾಡದೆ ಅರ್ಹ ಮೃತ ರೈತರ ಮಕ್ಕಳಿಗೆ ಒದಗಿಸಲು ಅಗತ್ಯ ಕ್ರಮವಹಿಸಬೇಕು. ಈ ಎಲ್ಲ ವಿಷಯದ ಕುರಿತು ನಿಯಮಿತವಾಗಿ ಪ್ರತಿ ತಿಂಗಳ ಮೊದಲನೇ ಸೋಮವಾರ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾಮಿ, ಕೃಷಿ ಇಲಾಖೆಯ ಉಪನಿರ್ದೇಶಕರು, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.