

ಹೊನ್ನಾವರ: ಶೋಷಿತ ಸಮುದಾಯವು ಮುಖ್ಯವಾಹಿನಿಗೆ ಬಂದು ಸಮಾಜದಲ್ಲಿ ತಲೆಯೆತ್ತಿ ನಿಲ್ಲಲು, ಸಮಾನತೆಯಿಂದ ಬದುಕು ಸಾಗಿಸುವಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ದೊಡ್ಡದು ಎಂದು ಚಿತ್ರದುರ್ಗ ಮಾದರಚೆನ್ನಯ್ಯ ಮಠಾಧೀಶ ಶ್ರೀ ಬಸವಮೂರ್ತಿ ಮಾದರಚೆನ್ನಯ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ನಾಮಧಾರಿ ಹಿತರಕ್ಷಣಾ ವೇದಿಕೆ ಮತ್ತು ದಲಿತ ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಅಂಬೇಡ್ಕರ್ ಅವರಿಗಿದ್ದ ಕಷ್ಟ-ಕಾರ್ಪಣ್ಯ, ಶೋಷಣೆ, ದೌಜನ್ಯ, ಜಾತಿವ್ಯವಸ್ಥೆ, ಅಸ್ಪೃಶ್ಯತೆ ಈಗ ಕಡಿಮೆಯಾಗುತ್ತಿದೆ. ಅಂದು ಈ ಅನುಭವಗಳು ಆದ ನಂತರ ಪ್ರಜಾಸತ್ತಾತ್ಮಕ ಹಕ್ಕುಗಳ ಬಾಧ್ಯತೆ ಮೇರೆಗೆ ಧ್ವನಿ ಎತ್ತುವುದಕ್ಕೆ ಅಂಬೇಡ್ಕರ್ ಅವರು ಅವಕಾಶ ಕಲ್ಪಿಸಿದ್ದಾರೆ. ಭಾರತದಲ್ಲಿರುವವರೆಲ್ಲರೂ ಸಮಾನತೆಯಿಂದ ಬದುಕಬೇಕು ಎಂಬ ಉದ್ದೇಶದಿಂದ ಸಂವಿಧಾನ ರಚಿಸಿದ್ದಾರೆ. ದಲಿತ ವರ್ಗವು ಮಾತ್ರ ವಿಶೇಷವಾಗಿ ಆಚರಿಸುತ್ತಿದ್ದ ಅಂಬೇಡ್ಕರ ಜಯಂತಿ ಕಾರ್ಯಕ್ರಮವನ್ನು ಹಿಂದುಳಿದ ಇತರ ಸಮುದಾಯದವರೂ ಕೈಜೋಡಿಸಿ ಕಾಳಜಿಯಿಂದ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಮಾಜಿ ಸಚಿವ ಆರ್.ಎನ್. ನಾಯ್ಕ ಮಾತನಾಡಿ, ಅಂಬೇಡ್ಕರ್ ಅವರು ಶಿಸ್ತಿನ ಜೀವನಶೈಲಿ ಹೊಂದಿದ್ದರು. ಅವರ ತತ್ವಾದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಕೀಲ ನಾಗರಾಜ ನಾಯಕ ಮಾತನಾಡಿದರು. ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ, ಪತ್ರಕರ್ತ ಸಂದೀಪ ಸಾಗರ, ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಲಿಷಾ ಎಲಕಪಾಟಿ, ಡಾ. ಜಿ.ಪಿ. ಪಾಠಣಕರ ಮಾತನಾಡಿದರು. ತಹಸೀಲ್ದಾರ್ ಪ್ರವೀಣ ಕರಾಂಡೆ, ಪಪಂ ಮುಖ್ಯಾಧಿಕಾರಿ ಯೇಸು ಬೆಂಗಳೂರು, ಇತರರಿದ್ದರು. ನಾಮಧಾರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿಕ್ರಮ ನಾಯ್ಕ ಸ್ವಾಗತಿಸಿದರು. ಬಿ.ಟಿ. ಗಣಪತಿ ನಾಯ್ಕ, ಸುಧೀಶ ನಾಯ್ಕ ಮತ್ತು ಪ್ರಕಾಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.