ಎಲ್ಲ ಕ್ಷೇತ್ರದವರ ಅನುಭವ ಅಕ್ಷರ ರೂಪದಲ್ಲಿ ದಾಖಲಾಗಲಿ

mysore
Published on

ಮೈಸೂರು: ವಿವಿಧ ರಂಗದ ಪ್ರತಿನಿಧಿಗಳು ಸಾಹಿತ್ಯ ಕೃಷಿ ಮಾಡಿದಾಗ ಕನ್ನಡ ಸಾಹಿತ್ಯ ಕ್ಷೇತ್ರ ವಿಸ್ತಾರವಾಗಿ ಬೆಳೆಯುತ್ತದೆ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.


ಕವಿತಾ ಪ್ರಕಾಶನದ ವತಿಯಿಂದ ಬ್ಯಾಂಕ್ ಉದ್ಯೋಗಿ ರಘುಪತಿ ತಾಮ್ಹನ್‌ಕರ್ ಅವರ ಕೃತಿ ‘ನೋಟಿನ ನಂಟು’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಎಲ್ಲ ಕ್ಷೇತ್ರದವರ ಅನುಭವ ಅಕ್ಷರ ರೂಪದಲ್ಲಿ ದಾಖಲಾಗಬೇಕು. ಇದರಿಂದ ಸಾಹಿತ್ಯ ಸಮಗ್ರವಾಗಿ ಬೆಳವಣಿಗೆಯಾಗಲು ಸಹಕಾರಿಯಾಗುತ್ತದೆ. ಆದರೆ, ಕನ್ನಡ ಸಾಹಿತ್ಯದಲ್ಲಿ ವೈವಿಧ್ಯಮಯ ಕೃತಿಗಳ ಕೊರತೆ ಇದೆ. ಇಂಗ್ಲಿಷ್ ಸಾಹಿತ್ಯದಲ್ಲಿ ವಿವಿಧೆತೆ ಹೆಚ್ಚು. ಈ ವಿಷಯದಲ್ಲಿ ಅದು ಮುಂಚೂಣಿಯಲ್ಲಿ ನಿಂತಿದೆ ಎಂದರು.


ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ಕ್ಷೇತ್ರದ ಕೃತಿಗಳು ಸಾಕಷ್ಟು ಇವೆ. ಆದರೆ, ಬ್ಯಾಂಕ್ ಕುರಿತು ಕೃತಿಗಳ ಅಭಾವ ಇದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಉದ್ಯೋಗಿ ರಘುಪತಿ ತಾಮ್ಹನ್‌ಕರ್ ಪುಸ್ತಕ ಮಹತ್ವದಾಗಿದೆ. ಬೇರೆ ಬೇರೆ ಕ್ಷೇತ್ರದ ಲೇಖಕರು ಬರವಣಿಗೆಯಲ್ಲಿ ಸಕ್ರಿಯವಾಗಬೇಕು ಎಂದು ಡಾ.ಸಿ.ಪಿ.ಕೃಷ್ಣಕುಮಾರ್ ಕಿವಿಮಾತು ಹೇಳಿದರು.


ಹಾಸ್ಯಪ್ರಜ್ಞೆಯೂ ಮಿಳಿತವಾಗಿದೆ:


ನೋಟಿನ ನಂಟಿನ ಲೋಕದ ಅನುಭವ ಕಥನ ಈ ಕೃತಿಯಲ್ಲಿ ದಾಖಲಾಗಿದೆ. ಇದು ಕರ್ತವ್ಯ ಕಥನವೂ ಹೌದು. ಸ್ವಾರಸ್ಯಕರ ಬರಹವೂ ಹೌದು. ಹಣಕಾಸಿನ ವ್ಯವಹಾರದ ಕುರಿತು ಉಲ್ಲೇಖಿಸುವ ಸಂದರ್ಭದಲ್ಲಿ ಹಾಸ್ಯಪ್ರಜ್ಞೆಯೂ ಮಿಳಿತವಾಗಿ ಗಮನ ಸೆಳೆಯುತ್ತದೆ ಎಂದು ಕೃಷ್ಣಕುಮಾರ್ ಹೇಳಿದರು.


ಪ್ರತಿಯೊಬ್ಬರಿಗೂ ನೋಟಿನ ನಂಟು ಕಡೆಯವರೆಗೂ ಇರುತ್ತದೆ. ಹಿಂದೆ ನಾಣ್ಯದ ನಂಟಿತ್ತು. ಇದೀಗ ನೋಟಿನ ನಂಟು. ಪ್ರತಿಯೊಬ್ಬರಿಗೂ ಒಂದೊಂದು ಪ್ರಪಂಚ ಇರುತ್ತದೆ. ಅದೇ ರೀತಿ ಬ್ಯಾಂಕ್ ಪ್ರಪಂಚಕ್ಕೆ ಇಲ್ಲಿ ಅಕ್ಷರ ರೂಪಕೊಡಲಾಗಿದೆ ಎಂದರು.


ಲೇಖಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ವಿಭಾಗೀಯ ಪ್ರಬಂಧಕ ಕೆ.ಗೋಪಾಲ್, ಬ್ಯಾಂಕ್ ಉದ್ಯೋಗಿ, ಲೇಖಕಿ ಡಾ.ಶುಭಶ್ರೀ ಪ್ರಸಾದ್, ಪ್ರಕಾಶಕ ಗಣೇಶ ಅಮೀನಗಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net