ಪರೀಕ್ಷೆ ಆತಂಕವಾಗದೆ ಹಬ್ಬವಾಗಲಿ

exam
Published on

ಮೈಸೂರು: ‘ಮಾರ್ಚ್’ ಶಾಲಾ-ಕಾಲೇಜು ಮಕ್ಕಳಿಗೆ ಪರೀಕ್ಷಾ ಕಾಲ. ಈ ಹಿಂದಿನಿಗಿಂತ ಈಗ ಪರೀಕ್ಷಾ ಒತ್ತಡವನ್ನು ವಿದ್ಯಾರ್ಥಿಗಳ ಮೇಲೆ ಅಧಿಕವಾಗಿ ಹೇರಲಾಗುತ್ತಿದೆ. ಇದು ಮಾನಸಿಕ, ದೈಹಿಕವಾಗಿ ಸಮಸ್ಯೆ ಸೃಷ್ಟಿಸುತ್ತಿದೆ.


ಮಾರ್ಚ್ ಮೊದಲ ವಾರದಿಂದಲೇ 1 ರಿಂದ 9ನೇ ತರಗತಿಯ ಮಕ್ಕಳಿಗೆ ಅಂತಿಮ ಪರೀಕ್ಷೆಗಳು ಶುರುವಾಗಲಿದೆ. ಇದರೊಂದಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನೂ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಪಠ್ಯಕ್ರಮ ಬೋಧನೆ ಪೂರ್ಣಗೊಂಡಿದ್ದು, ಮರುಮನನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಇದರೊಂದಿಗೆ ಪರೀಕ್ಷೆಗೆ ಸಕಲ ತಯಾರಿಯನ್ನು ಮಕ್ಕಳು ಮಾಡಿಕೊಳ್ಳುತ್ತಿದ್ದಾರೆ.


ಪರೀಕ್ಷೆಯನ್ನು ಸರಳವಾಗಿ ನಿರ್ವಹಣೆ ಮಾಡಿದರೆ ಏನೂ ಸಮಸ್ಯೆ ಇಲ್ಲ. ಆದರೀಗ ಶಾಲಾ ಹಂತದ ಪರೀಕ್ಷೆಗೆ ಪಾಲಕರು ಅತಿಯಾಗಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಬೋರ್ಡ್ ಪರೀಕ್ಷೆಯಂತೆ ಭಾವಿಸಿಕೊಂಡು ಅನಗತ್ಯ ಒತ್ತಡವನ್ನು ಮಕ್ಕಳ ಮೇಲೆ ಹೇರಲಾಗುತ್ತಿದೆ. ಪಾಠ- ಪ್ರವಚನದಂತೆ ಸಾಮಾನ್ಯವಾಗಿ ನಿರ್ವಹಣೆ ಮಾಡಬೇಕಿದ್ದ ಪರೀಕ್ಷೆ ಈಗ ಕಬ್ಬಿಣದ ಕಡಲೆಯಂತಾಗಿದೆ.


ಶಿಕ್ಷಕರು ಮಕ್ಕಳ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತಿದ್ದರೆ, ಮನೆಯಲ್ಲೂ ಪಾಲಕರು ಅದಕ್ಕಿಂತ ಹೆಚ್ಚಿನ ಒತ್ತಡ ಹಾಕುವ ಮೂಲಕ ಅವರನ್ನು ಸಮಸ್ಯೆಗೆ ಸಿಲುಕಿಸುತ್ತಿದ್ದಾರೆ. ಹೀಗಾಗಿ, ಖುಷಿಯಿಂದ ಎದುರಿಸಬೇಕಿದ್ದ ಪರೀಕ್ಷೆ ಮಕ್ಕಳ ಪಾಲಿಗೆ ನರಕವನ್ನು ಸೃಷ್ಟಿಸುತ್ತಿವೆ. ಅವರ ಸಹಜ ಬೆಳವಣಿಗೆ, ಬುದ್ಧಿಮಟ್ಟ ವಿಕಾಸಕ್ಕೆ ಅಡ್ಡಿ ಉಂಟು ಮಾಡಿದೆ. ಇದರೊಂದಿಗೆ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಪಾಲಕರು, ಶಿಕ್ಷಕರು

ಎಚ್ಚೆತ್ತುಕೊಳ್ಳಬೇಕಾಗಿದೆ. ಪರೀಕ್ಷೆಯನ್ನು ಮಾಮೂಲಿ ಶೈಕ್ಷಣಿಕ ಚಟುವಟಿಕೆಯಂತೆ ಒತ್ತಡರಹಿತವಾಗಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಿಕೊಡಬೇಕಿದೆ. ಈ ವಿಷಯವಾಗಿ ಶಿಕ್ಷಕರು, ತಜ್ಞರು, ಸಾರ್ವಜನಿಕರು, ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಅಭಿಪ್ರಾಯಗಳ ಸಾರಾಂಶ ಇಲ್ಲಿದೆ.

ಆತ್ಮವಿಶ್ವಾಸದಿಂದ ಮುನ್ನುಗ್ಗಿ


ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವಾರ್ಷಿಕ ಪರೀಕ್ಷೆ ಕುರಿತು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಪೈಕಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ಪಠ್ಯಕ್ರಮ ಬೋಧನೆ ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದಾರೆ. ಒತ್ತಡರಹಿತವಾಗಿ ಆತ್ಮವಿಶ್ವಾಸದಿಂದ ಮಕ್ಕಳು ಪರೀಕ್ಷೆಯನ್ನು ಎದುರಿಸಬೇಕು.
ಎಚ್.ಕೆ.ಪಾಂಡು
ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಪರಿಶ್ರಮ, ಮಾರ್ಗದರ್ಶನ ಇದ್ದರೆ ಸಾಧನೆ


ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಪರಿಶ್ರಮದಿಂದ ವ್ಯಾಸಂಗ ಮಾಡಬೇಕು. ಜತೆಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಮುಂದುವರಿದಿದ್ದೇ ಆದಲ್ಲಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಿ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಾಗಲಿದೆ. ಶೈಕ್ಷಣಿಕ ವರ್ಷ ಆರಂಭದಿಂದಲೂ ನಿಯಮಿತವಾಗಿ ವ್ಯಾಸಂಗ ಮಾಡುವುದರಿಂದ ಪರೀಕ್ಷೆ ವೇಳೆ ಯಾವ ಭಯ ಇಲ್ಲದೆ ಆತ್ಮವಿಶ್ವಾಸದಿಂದ ಪ್ರಶ್ನೆಪತ್ರಿಕೆಯಲ್ಲಿ ಕೇಳಿರುವ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು.
ಬಿ.ವೈ.ಶ್ರೀದೇವಿ, ವಿದ್ಯಾರ್ಥಿನಿ

ಆಯಾ ದಿನದ ಪಾಠ ಆ ದಿನವೇ ಓದಿ


ಆಯಾ ದಿನ ಪಾಠವನ್ನು ಆಯಾ ದಿನವೇ ಓದಬೇಕು. ಪರೀಕ್ಷಾ ಕಾಲದಲ್ಲಿ ತಡವಾಗಿ ವ್ಯಾಸಂಗ ಆರಂಭಿಸಿರುವವರು ‘ಪ್ರಶ್ನೆಗಳ ಬ್ಯಾಂಕ್’ ಮೊರೆ ಹೋಗಬಹುದು. ಆದರೂ, ಇದನ್ನು ಶಿಕ್ಷಕರೊಂದಿಗೆ ಚರ್ಚಿಸಿ ಪರೀಕ್ಷೆ ಸಿದ್ಧತೆ ಮಾಡಿಕೊಳ್ಳಬೇಕು. ಜತೆಗೆ ಶಾಲೆಯಲ್ಲಿ ಬರೆದ ಪೂರ್ವಸಿದ್ಧತೆ ಪರೀಕ್ಷೆ ಹೊರತುಪಡಿಸಿ ಮನೆಯಲ್ಲಿ ಪ್ರತ್ಯೇಕವಾಗಿ ಸ್ವಯಂ ಪ್ರಿಪರೇಟರಿ ಎಕ್ಸಾಂ ಬರೆಯಬೇಕು. ಇದನ್ನು ಪಾಲಕರು ತಮ್ಮ ನಿಗಾದಲ್ಲಿ ಮಕ್ಕಳಿಂದ ಮಾಡಿಸಿದರೆ ಅವರಿಗೆ ಅಂತಿಮ ಪರೀಕ್ಷೆಯನ್ನು ಎದುರಿಸಲು ಸುಲಭವಾಗಲಿದೆ.
ಗೌತಮ್ ದೇವನೂರು, ಉಪನ್ಯಾಸಕರು

ಮೊಬೈಲ್‌ನಿಂದ ದೂರು ಉಳಿಯಿರಿ


ಪರೀಕ್ಷಾ ಕಾಲದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಗ್ಯಾಜೆಟ್‌ಗಳಿಂದ ದೂರ ಇರಲೇಬೇಕು. ಮನೆಯಲ್ಲಿ ಪಾಲಕರು ತಮ್ಮ ಮಕ್ಕಳ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣದ ಬಳಕೆ ಬಗ್ಗೆ ನಿಗಾ ಇಡಲೇಬೇಕು. ಗ್ಯಾಜೆಟ್‌ಗಳ ಒಳಿತು-ಕೆಡುಕುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ.
ಐ.ವೈ. ಸಂಜಯ್, ವಿದ್ಯಾರ್ಥಿ

ನಿದ್ದೆಗೆಟ್ಟು ಓದುವುದು ಸರಿಯಲ್ಲ


ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ರಾತ್ರಿಯಿಡೀ ನಿದ್ದೆಗೆಟ್ಟು ಓದುವುದು ಸರಿಯಲ್ಲ. ಪ್ರೌಢಶಿಕ್ಷಣ ಹಂತದ ವಿದ್ಯಾರ್ಥಿಗಳು ದಿನದಲ್ಲಿ 7 ಗಂಟೆ ನಿದ್ರೆ ಮಾಡಬೇಕು. ಇದರಿಂದ ವ್ಯಾಸಂಗ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ರಾತ್ರಿ 10ರವರೆಗೆ ಓದಿ ನಂತರ ಮಲಗಬೇಕು. ಮರುದಿನ ಬೆಳಗ್ಗೆ 5 ಗಂಟೆಗೆ ಎದ್ದು ಓದುವ ಅಭ್ಯಾಸವನ್ನು ಸರಿಯಾದ ಕ್ರಮದಲ್ಲಿ ಕೈಗೊಂಡಿದ್ದೇ ಆದಲ್ಲಿ ಓದಿದ್ದು ನೆನಪಿನಲ್ಲಿ ಉಳಿದು ಪರೀಕ್ಷೆಯಲ್ಲಿ ನೆರವಿಗೆ ಬರುತ್ತದೆ.
ಎಂ.ಎಸ್.ದಿನೇಶ್, ಶಿಕ್ಷಕರು

ನಿರಂತರ ಪ್ರಯತ್ನ ಮುಖ್ಯ


ಶಾಲೆಯಲ್ಲಿ ಸಮರ್ಪಕವಾಗಿ ಕಲಿಕೆ ಮಾಡದವರಿಗೆ ಮಾತ್ರ ಪರೀಕ್ಷೆ ಕಠಿಣ ಎನಿಸುತ್ತದೆ. ಇದಕ್ಕೆ ಆಸ್ಪದ ನೀಡದೆ ಶಾಲಾರಂಭದಿಂದಲೂ ಶ್ರದ್ಧೆ, ನಿರಂತರ ಪರಿಶ್ರಮದಿಂದ ತರಗತಿಗಳಲ್ಲಿ ಶಿಕ್ಷಕರು ಮಾಡುವ ಪಾಠಗಳನ್ನು ವಿದ್ಯಾರ್ಥಿಗಳು ಗಮನವಿಟ್ಟು ಕೇಳಿದ್ದರೆ ಅದನ್ನು ನೆನಪಿನಲ್ಲಿ ಉಳಿಯುತ್ತದೆ. ಅದನ್ನು ಪರೀಕ್ಷೆಯಲ್ಲಿ ಸರಿಯಾದ ಉತ್ತರ ಬರೆಯಲು ಸಹಾಯವಾಗುತ್ತದೆ. ಇದಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡುತ್ತಿರಬೇಕು.
ವರ್ಷಿಣಿ, ಶಾಲಾ ವಿದ್ಯಾರ್ಥಿನಿ

ಒತ್ತಡ ಆರೋಗ್ಯದ ಮೇಲೆ ಪರಿಣಾಮ


ಪರೀಕ್ಷೆಯೆಂದರೆ ಆತಂಕ, ಒತ್ತಡ, ಭಯಪಡುವ ವಿದ್ಯಾರ್ಥಿಗಳೇ ಹೆಚ್ಚು. ಹೇಗೆ ಅಧ್ಯಯನ ಮಾಡಬೇಕೆಂದು ಗೊತ್ತಾಗುವುದಿಲ್ಲ. ಕಲಿತಿದ್ದು ನೆನಪಿನಲ್ಲಿ ಉಳಿಯುವುದಿಲ್ಲ, ಮರೆತು ಹೋಗುತ್ತದೆ. ಏಕಾಗ್ರತೆಯಿಲ್ಲ ಇತ್ಯಾದಿ ಹೇಳುವುದನ್ನು ಕೇಳುತ್ತೇವೆ. ಈಗಿನ ಕಾಲದಲ್ಲಿ ಅನಗತ್ಯ ಒತ್ತಡಗಳನ್ನು ಮಕ್ಕಳ ಮೇಲೆ ಹೇರುತ್ತಾರೆ. ಇದು ಹಲವು ಸಂದರ್ಭಗಳಲ್ಲಿ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಅಶೋಕ್‌ಕುಮಾರ್, ನಿವೃತ್ತ ಶಿಕ್ಷಕರು

ತಲೆನೋವಿನಿಂದ ಬಳಲುವವರ ಸಂಖ್ಯೆ ಹೆಚ್ಚಳ


ಬಹುತೇಕ ಮಕ್ಕಳು ಒತ್ತಡ, ಆತಂಕದ ತಲೆನೋವಿನಿಂದ ಬಳಲುತ್ತಿರುತ್ತಾರೆ. ಈ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಅಧಿಕವಾಗಿದೆ. ನೆತ್ತಿಯ ಕೆಳಗೆ ಕುತ್ತಿಗೆ ಮತ್ತು ಭುಜದ ಭಾಗದ ಸ್ನಾಯುಗಳ ಒತ್ತಡ ಮತ್ತು ಆಯಾಸದಿಂದ ಮಕ್ಕಳಲ್ಲಿ ಈ ರೀತಿಯ ತಲೆನೋವು ಬರುತ್ತದೆ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ. ಮಕ್ಕಳಲ್ಲಿ ಪರೀಕ್ಷೆ ಮುಗಿದ ಬಳಿಕವೂ ಇದೇ ರೀತಿ ತಲೆನೋವು ಮುಂದುವರಿದರೆ ಆರೋಗ್ಯ ತಪಾಸಣೆ ಮಾಡಿ ತಲೆನೋವಿಗೆ ಕಾರಣವೇನೆಂದು ತಿಳಿದುಕೊಂಡು ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ
ಡಾ.ಸಿ.ಎಂ.ಮಂಜುನಾಥ್, ವೈದ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net