

ಕುಮಟಾ: ಜನಸಾಮಾನ್ಯರಂತೆಯೇ ನಾವೂ ಇದ್ದೇವೆ, ಯಾರಿಗೂ ಕಮ್ಮಿ ಇಲ್ಲ ಎಂಬ ಭಾವನೆ ಅಂಗವಿಕಲರಲ್ಲಿ ಮೂಡಿಸುವಂಥ ಹಲವಾರು ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ನೀಡಲಾಗಿದೆ. ಕೊಡುಗೆಯಾಗಿ ನೀಡಿದ ಸಲಕರಣೆಗಳ ಪ್ರಯೋಜನ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಪಂ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಭಾರತ ಸರ್ಕಾರದ ಅಡಿಪ್ ಯೋಜನೆಯಡಿ ಅಂಗವಿಕಲರಿಗೆ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿ ಹಿರಿಯ ನಾಗರಿಕರಿಗೆ ಬೆಂಗಳೂರಿನ ಅಲಿಮ್ಕೋ ಕಂಪನಿಯಿಂದ ಉಚಿತ ಸಹಾಯಕ ಸಾಧನಗಳ ವಿತರಿಸಿ ಅವರು ಮಾತನಾಡಿದರು.
ಒಮ್ಮೆ ಉಚಿತ ಸಾಧನಗಳನ್ನು ಪಡೆದುಕೊಂಡ ಅಂಗವಿಕಲರಿಗೆ 10 ವರ್ಷದ ನಂತರ ಪುನಃ ನೀಡಿದ ಸಲಕರಣೆ ಬದಲಿಸಿ ಅಥವಾ ಹೊಸದಾಗಿ ಗುಣಮಟ್ಟದ ಸಲಕರಣೆ ನೀಡುವಂತಾಗಬೇಕು. ಇದು ಕಾಟಾಚಾರದ ಕಾರ್ಯಕ್ರಮವಾಗಬಾರದು. ಏಕೆಂದರೆ ಕರಾವಳಿ ಭಾಗದಲ್ಲಿ ತುಕ್ಕು ಮತ್ತು ತೇವಾಂಶದಿಂದ ಸಲಕರಣೆಗಳು ಬೇಗನೆ ಹಾಳಾಗುತ್ತವೆ. ಅಂಗವಿಕಲರ ಬಗ್ಗೆ ನಾವೆಲ್ಲರೂ ಹೆಚ್ಚಿನ ಕಾಳಜಿ ವಹಿಸಬೇಕು. ಅಂಗವಿಕಲರು ಹಾಗೂ ಹಿರಿಯ ನಾಗರಿಕರು ತಮ್ಮ ಯಾವುದೇ ಸಮಸ್ಯೆಗಳನ್ನು ನನ್ನಲ್ಲಿ ನಿವೇದಿಸಿಕೊಳ್ಳಬಹುದು ಎಂದರು.
ತಾಲೂಕಿನ ವ್ಯಾಪ್ತಿಯ 73 ಅಂಗವಿಕಲ ಫಲಾನುಭವಿಗಳಿಗೆ ವ್ಹೀಲ್‌ಚೇರ್, ಬ್ಯಾಟರಿ ಚಾಲಿತ ಟ್ರೈಸಿಕಲ್, ಶ್ರವಣ ಸಾಧನ, ಯಂತ್ರಚಾಲಿತ ತ್ರಿಚಕ್ರ ವಾಹನ ಸೇರಿದಂತೆ ಇತರ ಸಾಧನ ಸಲಕರಣೆಗಳು ಮತ್ತು ತಾಪಂ ವತಿಯಿಂದ 2 ಅಂಗವಿಕಲರ ಸ್ಕೂಟಿ, ವ್ಹೀಲ್ ಚೇರ್ ಸೇರಿದಂತೆ 10 ಫಲಾನುಭವಿಗೆ ವಿವಿಧ ಸಾಧನ, ಸಲಕರಣೆ ವಿತರಿಸಲಾಯಿತು.
ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ, ತಾಪಂ ಇಒ ಉದಯ ನಾಯ್ಕ, ಸಿಡಿಪಿಒ ಶೀಲಾ ಪಾಟೀಲ್, ಜಿಲ್ಲಾ ಹಿರಿಯ ನಾಗರಿಕರ ಮತ್ತು ಅಂಗವಿಕರಲ ಸಬಲೀಕರಣ ಅಧಿಕಾರಿ ರಾಘವೇಂದ್ರ ಭಟ್, ಅಲಿಮ್ಕೋ ಕಂಪನಿಯ ಅಭಿಷೇಕ್‌ಕುಮಾರ, ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಆರ್.ಜಿ. ನಾಯ್ಕ ಇದ್ದರು. ವಿನಾಯಕ ವೈದ್ಯ, ನಾಗರಾಜ ಶೆಟ್ಟಿ, ಸುಧಾ ಭಟ್ ಇತರರು ನಿರ್ವಹಿಸಿದರು.