

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ನಡೆಸಿದ ಲೋಕಸಭೆ ಚುನಾವಣೆ ಪ್ರಚಾರ ಭಾಷಣದಲ್ಲಿ ಕೀಳುಮಟ್ಟದ ಭಾಷೆ ಬಳಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಚುನಾವಣೆ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಅನರ್ಹಗೊಳಿಸಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಆಯೋಗವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಆಯೋಗ 24 ತಾಸಿನಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಗಕ್ಕೆ ನಾವೇ ದೂರು ಕೊಡುತ್ತೇವೆ ಎಂದರು.
ಕಾಂಗ್ರೆಸ್ ನೇತೃತ್ವದ ಒಕ್ಕೂಟ ಆಡಳಿತಕ್ಕೆ ಬಂದರೆ ಜನರ ಆಸ್ತಿ ಕಸಿದುಕೊಳ್ಳುತ್ತದೆ ಎಂದು ದೂರುತ್ತಿರುವ ಬಿಜೆಪಿ, ಕಾಂಗ್ರೆಸ್ಗೆ ಮಾವೋಯಿಸ್ಂ ಬಣ್ಣ ಬಳಿಯುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ತಾಳಿ ಕಸಿದುಕೊಳ್ಳುತ್ತದೆ ಎಂಬ ಆತಂಕವನ್ನು ಜನರಲ್ಲಿ ಮೂಡಿಸುತ್ತಿದೆ ಎಂದು ದೂರಿದರು.
ಮಹಿಳೆಯರಿಗೆ ತಾಳಿ ಭಾಗ್ಯ ಕೊಟ್ಟಿದ್ದೇ ಕಾಂಗ್ರೆಸ್. ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ಬದುಕು ಕಟ್ಟಿಕೊಟ್ಟಿದೆ. ಮನೆಗಳನ್ನು ನಿರ್ವಿುಸಿದೆ. ಜನಕಲ್ಯಾಣದಲ್ಲಿ ತೊಡಗಿರುವ ಪಕ್ಷ ನಮ್ಮದು ಎಂದರು.
ಬಿಜೆಪಿ ಭಾರತ ಮಾತೆಗೆ ಜೈಕಾರ ಕೂಗುತ್ತ ಭಾರತ ಮಾತೆಯ ಆಭರಣಗಳನ್ನು ಕಿತ್ತುಕೊಳ್ಳುತ್ತಿದೆ. ಭಾರತದ ಆಭರಣಗಳಾದ ಹೆದ್ದಾರಿ, ವಿಮಾನ ನಿಲ್ದಾಣ, ರೈಲ್ವೆ ಆಸ್ತಿ ಸೇರಿದಂತೆ ಇನ್ನಿತರ ಆಸ್ತಿಗಳನ್ನು ಉದ್ಯಮಿಗಳಿಗೆ ಮಾರಾಟ ಮಾಡುತ್ತಿದೆ. ಅಂಬಾನಿ, ಅಧಾನಿ, ಮಲ್ಯರಂತಹ ಉದ್ಯಮಿಗಳಿಗೆ ಹಲವಾರು ಆಸ್ತಿಗಳನ್ನು ನೀಡಿದೆ. ಗುಜರಾತ್ನ ಚಿನ್ನಾಭರಣ ವ್ಯಾಪಾರಸ್ಥರಿಗೂ ದೇಶದ ಆಸ್ತಿಗಳನ್ನು ಮಾರಾಟ ಮಾಡಿದೆ ಎಂದು ದೂರಿದರು.
ಕಾಂಗ್ರೆಸ್ನ ಜನಕಲ್ಯಾಣ ಕಾರ್ಯಕ್ರಮಗಳನ್ನು ಸಹಿಸದ ಬಿಜೆಪಿ, ಸುಳ್ಳು ಆರೋಪಗಳನ್ನು ಮಾಡುತ್ತ ಜನರ ದಾರಿ ತಪ್ಪಿಸುತ್ತಿದೆ. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ನಕಲು ಮಾಡುತ್ತಿದೆ ಎಂದರು.
ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೊಡಬೇಕಿದ್ದ ಅನುದಾನ ಸಕಾಲಕ್ಕೆ ಕೊಡಲಿಲ್ಲ. ಬರಗಾಲ ಪರಿಹಾರವನ್ನೂ ನೀಡಲಿಲ್ಲ. ಸಕಾಲಕ್ಕೆ ಬರಗಾಲ ಪರಿಹಾರ ನೀಡಿದ್ದರೆ ರೈತರಿಗೆ ಅನುಕೂಲ ಆಗುತ್ತಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ಜನತೆಯ ಕ್ಷಮೆ ಕೇಳಬೇಕು. ಕರ್ನಾಟಕದ ಮತದಾರರ ಮತ ಕೇಳುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ ಎಂದು ಹೇಳಿದರು.
ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ಮುಖಂಡರಾದ ಎ.ಎಂ. ಹಿಂಡಸಗೇರಿ, ಮಹೇಂದ್ರ ಸಿಂಘಿ, ಎಚ್.ಎಫ್. ಜಕ್ಕಪ್ಪನವರ, ಅಲ್ತಾಫ ಹಳ್ಳೂರ ಸುದ್ದಿಗೋಷ್ಠಿಯಲ್ಲಿ ಇದ್ದರು.