

ವಿಜಯವಾಣಿ ಸುದ್ದಿಜಾಲ ಧಾರವಾಡ
ಉತ್ಕೃಷ್ಟ ಮಾನವ ಸಂಪನ್ಮೂಲವನ್ನು ರಾಷ್ಟ್ರ ಸೇವೆಗೆ ಸಮರ್ಪಿಸುವ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಆದರ್ಶಪ್ರಾಯರಾಗಿರಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗಜಾನನ ಮನ್ನಿಕೇರಿ ಅಭಿನಂದನಾ ಸಮಿತಿ ಹಾಗೂ ಚಿನ್ಮಯ ಪ್ರಕಾಶನ ವತಿಯಿಂದ ಭಾನುವಾರ ಏರ್ಪಡಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಅಭಿನಂದನೆ ಹಾಗೂ ಅಭಿನಂದನಾ ಗ್ರಂಥದ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಲಾಖೆ ಗೌರವಕ್ಕೆ ಚ್ಯುತಿ ಬಾರದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಶೈಕ್ಷಣಿಕ ಗುಣಮಟ್ಟ ಎತ್ತರಿಸುವಲ್ಲಿ ಅಧಿಕಾರಿಗಳು ಪಾರದರ್ಶಕ ನೆಲೆಯಲ್ಲಿ ಕಾರ್ಯ ಮಾಡಿದಾಗ ಶಾಲಾ ಶಿಕ್ಷಣ ಇಲಾಖೆಯನ್ನು ಸಮಾಜ ಗೌರವದಿಂದ ಕಾಣುತ್ತದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಹುದ್ದೆವರೆಗೆ ಕಾರ್ಯನಿರ್ವಹಿಸಿರುವ ಗಜಾನನ ಮನ್ನಿಕೇರಿ ಕ್ರಿಯಾಶೀಲವಾಗಿದ್ದು, ಇಲಾಖೆ ಗೌರವ ಹೆಚ್ಚಿಸಿದ್ದಾರೆ. ಇಂದು ಬಿಡುಗಡೆಯಾದ ಅಭಿನಂದನಾ ಗ್ರಂಥ ಅಕ್ಷರದೊಳಗಿನ ನಕ್ಷತ್ರ ಕೃತಿ. ಅವರ ವೃತ್ತಿ ಬದುಕನ್ನು ಅನಾವರಣಗೊಳಿಸುತ್ತದೆ ಎಂದರು.
ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಮಾತನಾಡಿ, ಗಜಾನನ ಮನ್ನಿಕೇರಿ ಇಲಾಖೆಗೆ ಶ್ರೇಷ್ಠ ಸೇವೆ ಸಲ್ಲಿಸಿದ್ದಾರೆ. ಅವರು ಬೆಳಗಾವಿ, ಧಾರವಾಡ, ವಿಜಯಪುರಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ಭಾಗಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳವಣಿಗೆಗೆ ಅನುಪಮ ಸೇವೆ ಸಲ್ಲಿದ್ದಾರೆ ಎಂದರು.
ಗಜಾನನ ಮನ್ನಿಕೇರಿ ಮಾತನಾಡಿ, 37 ವರ್ಷಗಳ ಶಿಕ್ಷಣ ಇಲಾಖೆ ಸೇವೆ ಸಂತೃಪ್ತಿ ತಂದಿದ್ದು, ಸೇವಾವಧಿಯಲ್ಲಿ ಹೊಗಳಿಕೆ ಮತ್ತು ತೆಗಳಿಕೆಗಳನ್ನು ಸಮನಾಗಿ ಸ್ವೀಕರಿಸಿ ವೃತ್ತಿಯ ಘನತೆ ಹೆಚ್ಚಿಸಲು ಶ್ರಮಿಸಿದ್ದೇನೆ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ, ಪ್ರೊ. ಕೆ.ಬಿ. ಗುಡಸಿ, ಪ್ರೊ. ಗಂಗಾಧರ ಮಳಗಿ, ಪ್ರೊ. ಚಂದ್ರಶೇಖರ ಅಕ್ಕಿ, ಪ್ರೊ. ಎಸ್.ಎಸ್. ಪಟಗುಂದಿ, ಡಾ ಬಾಳಪ್ಪ ಚಿನಗುಡಿ ಮಾತನಾಡಿದರು. ಗಜಾನನ ಮನ್ನಿಕೇರಿ ಅವರಿಗೆ ಸನ್ಮಾನಿಸಲಾಯಿತು. ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶೂನ್ಯ ಸಂಪಾದನಾಮಠದ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಧನವಂತ ಹಾಜವಗೋಳ, ಡಾ.ಎಸ್.ಆರ್. ರಾಮನಗೌಡರ, ಸುನಂದಾ ಮನ್ನಿಕೇರಿ, ಇತರರು ಇದ್ದರು. ಎಂ.ಜಿ. ದಾಸರ ಸ್ವಾಗತಿಸಿದರು. ಗುರುಮೂರ್ತಿ ಯರಗಂಬಳಿಮಠ ಮತ್ತು ರಾಜು ಭೂಶೆಟ್ಟಿ ನಿರೂಪಿಸಿದರು. ಸಿ.ವೈ. ತುಬಾಕಿ ವಂದಿಸಿದರು.