ಮುಳುಗಡೆ ಸಂತ್ರಸ್ತರು ಹೋರಾಟದ ಸಿದ್ಧತೆ ಮಾಡಿಕೊಳ್ಳಲಿ

BLG 12-1 SABHE
ಬೀಳಗಿ ತಾಲೂಕಿನ ಕೊರ್ತಿ ಪುಕೇದಲ್ಲಿನ ಕಲ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಮುಳುಗಡೆ ಸಂತ್ರಸ್ತರ ಸಮಸ್ಯೆಗಳು, ಸಲಹೆ, ಸೂಚನೆಗಳು ಮತ್ತು ಮುಂದಿನ ಹೋರಾಟದ ರೂಪುರೇಷಗಳನ್ನು ಸಿದ್ಧಪಡಿಸುವ ಪೂರ್ವಸಿದ್ಧತಾ ಸಭೆಯಲ್ಲಿ ಎಸ್.ಟಿ. ಪಾಟೀಲ ಮಾತನಾಡಿದರು. ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯ ಪ್ರಕಾಶ ಅಂತರಗೊಂಡ ಇತರರಿದ್ದರು.
Published on

ಬೀಳಗಿ: ಆಲಮಟ್ಟಿ ಜಲಾಶಯ 524.526 ಮೀಟರ್ ಎತ್ತರ ಆಗುವುದರಿಂದ ಸಾಧಕ-ಭಾದಕ ಮತ್ತು ಸರ್ಕಾರ ಈ ಯೋಜನೆ ಕುರಿತಾಗಿ ಕೈಗೊಂಡ ನೀತಿ ನಿಯಮಗಳು ಸಂತ್ರಸ್ತರ ಪಾಲಿಗೆ ಹಾನಿಯುಂಟು ಮಾಡುತ್ತಿದ್ದು, ಕೂಡಲೇ ಸರ್ಕಾರ ಎಚ್ಚರಿಸಲು ಮುಳುಗಡೆ ಸಂತ್ರಸ್ತರು ಹೋರಾಟದ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಮುಳುಗಡೆ ಸಂತ್ರಸ್ತರ ಪರ ಹೋರಾಟಗಾರ ಸಮಿತಿ ಪ್ರಮುಖ ಎಸ್.ಟಿ. ಪಾಟೀಲ ತಿಳಿಸಿದರು.

ತಾಲೂಕಿನ ಕೊರ್ತಿ ಪುಕೇದಲ್ಲಿನ ಕಲ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ನಡೆದ ಮುಳುಗಡೆ ಸಂತ್ರಸ್ತರ ಸಮಸ್ಯೆಗಳು, ಸಲಹೆ- ಸೂಚನೆಗಳು ಮತ್ತು ಮುಂದಿನ ಹೋರಾಟದ ರೂಪುರೇಷಗಳ ಸಿದ್ಧಪಡಿಸುವ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಕಳೆದ 20 ವರ್ಷಗಳ ಹಿಂದೆ ಕೈಗೊಂಡಿದ್ದ ಸಂತ್ರಸ್ತರ ಹೋರಾಟದ ದಾರಿಯಲ್ಲಿ ಈ ಬಾರಿಯೂ ಹೋರಾಟವಾದರೆ ಮಾತ್ರ ಸಂತ್ರಸ್ತರಿಗೆ ನ್ಯಾಯ ಸಿಗಲಿದೆ. ಅದಕ್ಕಾಗಿ ಈಗಾಗಲೇ ಸಂತ್ರಸ್ತರು ನೀಡಿದ ಸಲಹೆಯಂತೆ ಮೂರು ದಿನಗಳಲ್ಲಿ ತಾಲೂಕಿನ 20 ಹಳ್ಳಿಗಳಲ್ಲಿ ಮುಳುಗಡೆ ಹೋರಾಟ ಸಮಿತಿಯ ಕನಿಷ್ಠ 20 ಸದಸ್ಯರ ಗ್ರಾಮ ಘಟಕಗಳನ್ನು ಆರಂಭ ಮಾಡಿ ತಾಲೂಕು ಘಟಕಕ್ಕೆ ವರದಿ ನೀಡಬೇಕು. ಎಲ್ಲರಿಗೂ ಹೋರಾಟದ ರೂಪುರೇಷಗಳ ಕುರಿತು ಸಂದೇಶ ನೀಡಿ ಹೋರಾಟ ಮಾಡುವ ಯೋಜನೆ ಹಾಕಿಕೊಳ್ಳಬಹುದು. ಈಗಾಗಲೇ ಕೋರ್ಟಿನಲ್ಲಿ ಆವಾರ್ಡ್ ಆಗಿರುವ ಪ್ರಕರಣಗಳಿಗೆ ಸರ್ಕಾರ ಪರಿಹಾರ ಸಂದಾಯ ಮಾಡಬೇಕು. ಆಲಮಟ್ಟಿ ಜಲಾಶಯ ಎತ್ತರ 522 ಮೀಟರ್ ಆಗುವುದೋ ಅಥವಾ 524 ಮೀಟರ್ ಎತ್ತರ ಆಗುವುದೋ ಎಂಬ ಗೊಂದಲ ಹೋಗಬೇಕು. ಈಗಾಗಲೇ ಹೊರಡಿಸಿರುವ ಅಧಿಸೂಚನೆಗಳನ್ನು ಪೂರ್ಣಗೊಳಿಸಬೇಕೆನ್ನುವ ವಿಚಾರಗಳ ಹೋರಾಟದೊಂದಿಗೆ 524.256 ಮೀಟರ್ ವ್ಯಾಪ್ತಿಯಲ್ಲಿ ಮುಳುಗಡೆಯಾಗುವ ಭೂಮಿಯನ್ನು ಭೂಸ್ವಾಧೀನಪಡಿಸಿಕೊಂಡು ಈಗಿರುವ ಅತಂತ್ರ ಸ್ಥಿತಿ ಹೋಗಲಾಡಿಸಬೇಕು ಎಂಬ ನಿರ್ಣಯದೊಂದಿಗೆ ಸಂತ್ರಸ್ತರು ಮುಂದೆ ಸಾಗಬೇಕಿದ್ದು, ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲರೂ ಮುಂದೆ ಬರಬೇಕು ಎಂದರು.

ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ ಮಾತನಾಡಿ, ಹಲವು ವರ್ಷಗಳ ಹಿಂದೆ ಸಂತ್ರಸ್ತರು ಮತ್ತು ಶಾಸಕ ಜೆ.ಟಿ. ಪಾಟೀಲ, ಮಾಜಿ ಸಚಿವ ಎಸ್. ಆರ್. ಪಾಟೀಲ ನೇತೃತ್ವದಲ್ಲಿ ಸಂತ್ರಸ್ತರ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬರುವಂತಹ ಹೋರಾಟ ಮಾಡಲಾಗಿದೆ. ಸದ್ಯ ನಮಗೆಲ್ಲರಿಗೂ ಸಂಪೂರ್ಣ ನ್ಯಾಯ ಸಿಗುವ ನಿಟ್ಟಿನಲ್ಲಿ ಹೋರಾಟದ ರೂಪುರೇಷ ಮಾಡಿಕೊಂಡು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳ ಪರಿಹಾರಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಬೇಕಿದೆ. ನ.17 ರಂದು ಬಾಗಲಕೋಟೆಗೆ ಸಿಎಂ ಸಿದ್ದರಾಮಯ್ಯನವರು ಆಗಮಿಸಲಿದ್ದು, ಜಿಲ್ಲೆಯ ಎಲ್ಲ ಶಾಸಕ, ಸಚಿವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಗಳ ಅಹವಾಲು ನೀಡಿ ಬಗೆಹರಿಸುವಂತೆ ಆಗ್ರಹಿಸಲು ಒತ್ತಾಯಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯ ಪ್ರಕಾಶ ಅಂತರಗೊಂಡ, ಎಂ.ಎಲ್. ಕೆಂಪಲಿಂಗಣ್ಣವರ, ಎಂ.ಎಸ್. ಕಾಳಗಿ, ಜಿ.ಆರ್. ಪಾಟೀಲ, ಕಿರಣ ಬಾಳಾಗೋಳ, ಸಿದ್ದು ಗಿರಗಾಂವಿ, ಎಚ್.ಬಿ. ಸೊನ್ನದ, ಸುರೇದ್ರ ನಾಯಿಕ, ವಿರುಪಾಕ್ಷಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net