ಕುಡಿಯುವ ನೀರಿನ ಯೋಜನೆ ಪರಿಷ್ಕರಿಸಲಿ

aghanashini
Published on

ಕುಮಟಾ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪರಿಷ್ಕರಿಸಲು ಒತ್ತಾಯಿಸಿ ಅಘನಾಶಿನಿ ನದಿ ಉಳಿಸಿ ರೈತರ ಹೋರಾಟ ಸಮಿತಿಯಿಂದ ತಾಲೂಕಿನ ಮೇಲಿನ ಕಂದವಳ್ಳಿಯ ಸ್ಕಂದಮಾತಾ ಸಭಾಭವನದಲ್ಲಿ ಸೋಮವಾರ ರೈತರ ಮತ್ತು ನಾಗರಿಕರ ಹಕ್ಕೊತ್ತಾಯ ಸಭೆ ಏರ್ಪಡಿಸಲಾಗಿತ್ತು.

ಪರಿಸರ ತಜ್ಞ ಅನಂತ ಹೆಗಡೆ ಅಶೀಸರ ಮಾತನಾಡಿ, ಹೋರಾಟ ಮೂಲಕವೇ ನದಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಬದಲಾದ ಪ್ರಾಕೃತಿಕ ಸ್ವರೂಪದಲ್ಲಿ ನದಿಗಳು ಬತ್ತತೊಡಗಿವೆ. ಅಘನಾಶಿನಿ ನದಿಯಲ್ಲೂ ಕಳೆದ ಕೆಲ ವರ್ಷಗಳಿಂದ ಬೇಸಿಗೆಯಲ್ಲಿ ತೀವ್ರ ನೀರಿನ ಕೊರತೆ ಕಂಡುಬರುತ್ತಿರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಜನಜಾಗೃತಿ ಆಗಬೇಕಿದೆ ಎಂದರು.

ಪರಿಸರ ವಿಜ್ಞಾನಿ ಡಾ. ಎಂ.ಡಿ. ಸುಭಾಷಚಂದ್ರನ್, ಡಾ. ಬಾಲಚಂದ್ರ ಸಾಯಿಮನೆ, ಡಾ. ಕೇಶವ ಕೂರ್ಸೆ, ಡಾ. ಪ್ರಕಾಶ ಮೇಸ್ತ ಹೊನ್ನಾವರ, ನಾರಾಯಣ ಗಡಿಕೈ ಬೈರುಂಬೆ, ಅಧ್ಯಕ್ಷತೆ ವಹಿಸಿದ್ದ ಡಾ. ಮಹೇಶ ಅಡ್ಕೋಳಿ ಇತರರು ಮಾತನಾಡಿದರು.

ಒಟ್ಟಾರೆಯಾಗಿ ಸಭೆಯಲ್ಲಿ ತಾಲೂಕಿನ 14 ಗ್ರಾಮ ಪಂಚಾಯಿತಿಯ 53 ಗ್ರಾಮಗಳಿಗೆ ಸಿಹಿ ನೀರು ಪೂರೈಸುವ ಉದ್ದೇಶದಿಂದ ಮಂಜೂರಾಗಿರುವ 169 ಕೋಟಿ ರೂ. ಮೊತ್ತದ ಬಹುಗ್ರಾಮ ಯೋಜನೆಗೆ ಅಘನಾಶಿನಿ ನದಿಯ ದೀವಳ್ಳಿ ಜಲಮೂಲದಲ್ಲಿ ನೀರು ಅಲಭ್ಯವಿದೆ. ಆದರೂ ಅಲ್ಲಿಯೇ ಜಲಮೂಲ ನಿಗದಿಸಿರುವುದು ಅವೈಜ್ಞಾನಿಕ ಮತ್ತು ಯೋಜನೆ ವಿಫಲಗೊಳ್ಳಲು ಕಾರಣವಾಗಲಿದೆ. ನದಿ ತೀರದ ನಿವಾಸಿಗಳು, ರೈತರಿಗೆ ಮಾತ್ರವಲ್ಲದೆ ಈಗಾಗಲೇ ದೀವಳ್ಳಿ ಜಲಮೂಲದಿಂದ ನೀರು ಪೂರೈಸಲಾಗುತ್ತಿರುವ ಎರಡು ಬೃಹತ್ ಯೋಜನೆಗಳೂ ಬಂದ್ ಆಗಲು ಕಾರಣವಾಗಲಿದೆ. ಈ ಮೂಲಕ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುವ ಜತೆಗೆ ಅಘನಾಶಿನಿ ನದಿಯ ನಿಸರ್ಗ ಸಹಜ ಸ್ವರೂಪಕ್ಕೂ ಧಕ್ಕೆಯಾಗಲಿದೆ. ಇದನ್ನು ಸಾಮೂಹಿಕವಾಗಿ ತಡೆಯುವತ್ತ ಹೋರಾಟ ಮುಂದುವರಿಸಬೇಕೆಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು.

ಸಭಿಕರ ಸಹಮತದೊಂದಿಗೆ ನಿರ್ಣಯ ಕೈಗೊಂಡು ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು. ಡಾ. ಸುರೇಶ ಹೆಗಡೆ, ಸೂರಜ ನಾಯ್ಕ, ಹೋರಾಟ ಸಮಿತಿಯ ಮದನ ನಾಯಕ, ಗಣಪತಿ ಗೌಡ, ರವಿ ಹೆಗಡೆ ಕಲ್ಲಬ್ಬೆ, ಎಸ್.ವಿ.ಭಟ್, ವಿ.ಎಸ್.ಹೆಗಡೆ, ರಾಜಾರಾಮ ಭಟ್ ಇತರರು ಪಾಲ್ಗೊಂಡಿದ್ದರು.

ಸಭೆಯ ನಿರ್ಣಯಗಳು

ಅಘನಾಶಿನಿ ನದಿಯಿಂದ 53 ಗ್ರಾಮಗಳಿಗೆ ನೀರುಣಿಸುವ ಬಹುಗ್ರಾಮ ಯೋಜನೆಯನ್ನು ಸರ್ಕಾರ ಪರಿಷ್ಕರಿಸಬೇಕು. ದೀವಳ್ಳಿ ಜಲಮೂಲದ ಸ್ಥಳವನ್ನು ಬೊಗರಿಬೈಲಿಗೆ ಬದಲಾಯಿಸಬೇಕು. ಯೋಜನೆ ಈಗಿರುವಂತೆ ಜಾರಿಯಾದರೆ ಬೇಸಿಗೆಯಲ್ಲಿ ನೀರು ಅಲಭ್ಯವಾಗಲಿದೆ. ನದಿ ತೀರದ ರೈತರ, ನಿವಾಸಿಗಳ ಹಕ್ಕಿಗೆ ಚ್ಯುತಿ ತರಬಾರದು. ಸಿಹಿ ನೀರು ಹರಿವು ನಿಂತರೆ ನದಿಯ ಮೇಲ್ಭಾಗಕ್ಕೆ ಉಪ್ಪು ನೀರು ನುಗ್ಗಲಿದೆ. ಎಲ್ಲ ಯೋಜನೆ ಸಂಬಂಧಿತ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ನಿಲ್ಲಿಸಬೇಕು. ಸಂಬಂಧಿತ ಪಂಚಾಯಿತಿಗಳೆಲ್ಲವೂ ಸರ್ಕಾರಕ್ಕೆ ಪರಿಷ್ಕರಣೆಗೆ ಒತ್ತಾಯಿಸುವುದು ಹಾಗೂ ಪರಿಷ್ಕರಿಸಿದ ನಂತರವೇ ಒಪ್ಪಿಗೆ ನೀಡಬೇಕು. ಎಲ್ಲ ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳು ಸಭೆಯ ನಿರ್ಣಯಗಳಿಗೆ ಬೆಂಬಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net