

ಚಿಕ್ಕೋಡಿ: ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಡಿಸೆಂಬರ್ 31ರೊಳಗೆ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಹೊಸ ಜಿಲ್ಲೆಗಳ ಘೋಷಣೆ ಮಾಡಬೇಕು ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ ಒತ್ತಾಯಿಸಿದರು.
ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2026ರಲ್ಲಿ ಜನಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ಮನೆ ಮತ್ತು ಜನವಸತಿ ಪ್ರದೇಶದ ಸಮೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಬದಲಾವಣೆ ಮಾಡುವುದಿದ್ದರೆ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ಜನಗಣತಿ ಇಲಾಖೆ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿದೆ. ಆದ್ದರಿಂದ ಸರ್ಕಾರ ಈ ವಷರ್ದ ಅಂತ್ಯದೊಳಗೆ ಹೊಸ ಜಿಲ್ಲೆಗಳ ಘೋಷಣೆ ಮಾಡಬೇಕು ಎಂದು ಹೇಳಿದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಹಲವಾರು ವಷರ್ಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಮಾಡಲಾಗುತ್ತಿದೆ. ಆದರೂ, ಜಿಲ್ಲೆಯ ಕನಸು ನನಸು ಆಗುತ್ತಿಲ್ಲ. ಸರ್ಕಾರ ಆಡಳಿತಾತ್ಮಕ ದೃಷ್ಟಿಯಿಂದ ಕೂಡಲೇ ಬೆಳಗಾವಿ ಜಿಲ್ಲೆ ವಿಭಜಿಸಬೇಕೆಂದರು.
ರಫೀಕ್ ಪಠಾಣ, ರುದ್ರಯ್ಯ ಹಿರೇಮಠ, ಮೋಹನ ಪಾಟೀಲ, ಸಚಿನ ದೊಡ್ಡಮನಿ, ಚನ್ನಪ್ಪ ಬಡಿಗೇರ, ಅನಿಲ ನಾವಿ, ಅಮೂಲ ನಾವಿ ಸೇರಿದಂತೆ ಇತರರಿದ್ದರು.