

ಹುಣಸೂರು: ಹುಣಸೂರು ಪಟ್ಟಣದ ದೊಡ್ಡಹುಣಸೂರು ಸರ್ವೇ ನಂ.28ರ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯ ಕೆಲಭಾಗವನ್ನು ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ನಾದಿನಿಗೆ ಸ್ವಿಮ್ಮಿಂಗ್ ಪೂಲ್ ನಿರ್ಮಾಣಕ್ಕೆ ಬಾಡಿಗೆ ನೀಡುವ ಮೂಲಕ ಅಕ್ರಮ ವ್ಯವಹಾರ ನಡೆದಿದ್ದು, ಹುಣಸೂರಿನ ಈ ಭೂಅಕ್ರಮ ಪ್ರಕರಣದ ವಿರುದ್ಧ ಜಿಲ್ಲಾಡಳಿತ ಕ್ರಮವಹಿಸಬೇಕೆಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.
ಸರ್ವೇ ನಂ.ನಲ್ಲಿ ಒಟ್ಟು 7.10 ಎಕರೆ ಭೂಮಿಯಿದ್ದು ಈ ಪೈಕಿ 3 ಎಕರೆ ಭೂಮಿ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಮಾಲೀಕತ್ವದಲ್ಲಿದೆ. ಆದರೆ ಮಿಕ್ಕ 4.10 ಎಕರೆ ಭೂಮಿ ಬಿ ಖರಾಬು ಎಂದು ಪಹಣಿಯಲ್ಲಿ ಸ್ಪಷ್ಟವಾಗಿ ನಮೂದಾಗಿದೆ. ಹೀಗಿದ್ದರೂ ಕೊಡಗು ಕಾಫಿ ಬೆಳೆಗಾರರ ಸಂಘ ಮತ್ತು ಮಾಜಿ ಶಾಸಕರ ಪ್ರಭಾವದಿಂದ ಒಟ್ಟು 30,540 ಚದರಡಿ ಭೂಮಿಯನ್ನು ಮಾಸಿಕ 36,038 ರೂ. ಬಾಡಿಗೆಗೆ ಕರಾರು ಒಪ್ಪಂದವನ್ನು 2023ರ ನವೆಂಬರ್ 10ರಂದು ಮಾಜಿ ಶಾಸಕರ ನಾದಿನಿ ಡಾ.ಪುಷ್ಪಾ ಅಮರನಾಥ್‌ರ ಮಾಲೀಕತ್ವದಡಿ ಸಂಭ್ರಮ ಆ್ಯಡ್ಸ್ ಆ್ಯಂಡ್ ಈವೆಂಟ್ಸ್ ಸಂಸ್ಥೆಯಡಿ ಮಾಡಿಕೊಳ್ಳಲಾಗಿದೆ. ಇಲ್ಲಿ ಕೊಡಗು ಕಾಫಿ ಸಂಸ್ಥೆಯೂ ಭೂಮಿಯ ಒಡೆಯನಲ್ಲ. ಹಾಗಿರುವಾಗ ಅವರು ಒಪ್ಪಂದ ಪತ್ರ ಮಾಡಿಕೊಂಡಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಇದು ಸರ್ಕಾರಿ ಭೂಮಿಯ ಕಬಳಿಕೆ ಮತ್ತು ಅಕ್ರಮ ಎಂದು ಆರೋಪಿಸಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಢಿದರು.
ಇಷ್ಟೆಲ್ಲಾ ಅಕ್ರಮಗಳನ್ನು ಮಾಡಿರುವ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ 6 ತಿಂಗಳ ಹಿಂದೆ ಹುಣಸೂರು ಉಪವಿಭಾಗ ವ್ಯಾಪ್ತಿಯ ಬಡಜನರ ಅನುಕೂಲಕ್ಕಾಗಿ ನಿರ್ಮಾಣಗೊಂಡಿದ್ದ ಕಾವೇರಿ ಆಸ್ಪತ್ರೆಯ ಆರಂಭಕ್ಕೆ ಹಲವಾರು ಬಾರಿ ಇಲ್ಲಸಲ್ಲದ ಕಾರಣವೊಡ್ಡಿ ಕಿರುಕುಳ ನೀಡಿದ್ದರು. ಉದ್ಘಾಟನೆಗೆ ಅಡಚಣೆ ಉಂಟು ಮಾಡಿದ್ದರು. ಇದೀಗ ಇವರ ಬಣ್ಣ ಬಯಲಾಗಿದೆ. ಮಂಜುನಾಥ್ ನೀನು ಹುಣಸೂರಿಗೆ ಮಾಲೀಕನಲ್ಲ, ಬದಲಾಗಿ ನಮ್ಮಂತೆಯೇ ಸೇವಕ, ಮಾಲೀಕರಂತೆ ಮಾತಾಡಬಾರದು ಎಂದು ಗುಡುಗಿದರು.
ಸತತವಾಗಿ ಗೆಲ್ಲಿಸಿದ ಕುರುಬ ಮತ್ತು ನಾಯಕ ಸಮುದಾಯ ಸೇರಿದಂತೆ ಎಲ್ಲರಿಗೂ ಕಿರುಕುಳ ನೀಡಿದ್ದಾರೆ. ಸಿದ್ದರಾಮಯ್ಯನ ಆಪ್ತ ಎಂದು ಹೇಳುವುದು ಬಹಳ ದಿನ ನಡೆಯಲ್ಲ. ಈ ಜಾಗ ಕೂಡಲೇ ಕ್ಲಿಯರ್ ಮಾಡಲು ಜಿಲ್ಲಾಧಿಕಾರಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ನಗರಸಭೆ ಪರವಾನಗಿ: ನಗರಸಭಾ ಸದಸ್ಯ ಸತೀಶ್‌ಕುಮಾರ್ ಮಾತನಾಡಿ, ಜಮೀನು ಕಂದಾಯ ಇಲಾಖೆಗೆ ಸೇರಿದ ಭೂಮಿ ಎಂದು ಆರ್‌ಟಿಸಿಯಲ್ಲಿ ನಮೂದಾಗಿದ್ದರೂ ನಗರಸಭೆ ಅಧಿಕಾರಿಗಳು ಉದ್ದಿಮೆ ನಡೆಸಲು ಪರವಾನಗಿಯನ್ನು 2024ರ ಜ.1ರಂದು ನೀಡುವ ಮೂಲಕ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಕಟ್ಟಡ ಪರವಾನಗಿ ನೀಡಿಲ್ಲವೆಂದು ಮಾಹಿತಿ ಹಕ್ಕು ಕಾಯ್ದೆಯಡಿ ನಗರಸಭೆ ಉತ್ತರ ನೀಡಿದೆ. ಆದರೆ ಅಲ್ಲಿ ಬೃಹತ್ ಕಟ್ಟಡ ನಿರ್ಮಾಣಗೊಂಡಿದೆ. ಪರವಾನಗಿ ಪಡೆಯಲು ಬೇರೆ ಕಟ್ಟಡದ ಕಂದಾಯ ರಸೀದಿಯನ್ನು ಅಕ್ರಮವಾಗಿ ನೀಡಿ ಮೋಸ ಮಾಡಿದ್ದಾರೆ. ಅಂತೆಯೇ ಮಾಜಿ ಶಾಸಕರ ತಂದೆಯ ಹೆಸರಿನಲ್ಲಿರುವ ಪವನ್ ಜಲ್ ಕಾರ್ಖಾನೆ ಕೂಡ ವಸತಿ ಉದ್ದೇಶಕ್ಕೆ ಬಳಸುವ ಜಾಗವೆಂದು ನಮೂದಾಗಿದ್ದರೂ ಕಾರ್ಖಾನೆ ನಡೆಸಲಾಗುತ್ತಿದೆ. ಇದೇ ರೀತಿ ಕಾನೂನಿನ ಸ್ಪಷ್ಟ ಉಲ್ಲಂಘನೆ ಅವ್ಯಾಹತವಾಗಿ ನಡೆದಿದೆ ಎಂದು ಆರೋಪಿಸಿದರು.
ಸತ್ಯ ಎಂಎಎಸ್ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಅಕ್ರಮ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಅವರು ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮತ್ತು ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಶಿವಶೇಖರ್, ಫಜಲ್‌ವುಲ್ಲಾ, ಎಂ.ಶಿವಕುಮಾರ್, ಗಣೇಶ್ ಕುಮಾರಸ್ವಾಮಿ ಇದ್ದರು.