

ಮುಂಡಗೋಡ: ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಪೂರೈಕೆ ಅಂಗವಾಗಿ ನಿತ್ಯವೂ ಮೊಟ್ಟೆ, ಬಾಳೆಹಣ್ಣು, ಶೇಂಗಾಚಿಕ್ಕಿ ವಿತರಣೆ ಕಾರ್ಯವನ್ನು ಏಜೆನ್ಸಿಗೆ ವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಮೂಲಕ ಶಿಕ್ಷಣ ಸಚಿವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರು ಗುರುವಾರ ಮನವಿ ಸಲ್ಲಿಸಿದರು.
ತಾಲೂಕು ಕೇಂದ್ರದಂತಹ ನಗರಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ನಿತ್ಯವೂ ಮೊಟ್ಟೆ, ಬಾಳೆಹಣ್ಣ, ಶೇಂಗಾಚಿಕ್ಕಿ ಖರೀದಿಗೆ ಲಭ್ಯವಿರುವುದಿಲ್ಲ. ಮೊಟ್ಟೆ, ಬಾಳೆಹಣ್ಣುಗಳ ದರವೂ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಕೊರತೆಯಿಂದ ಸರ್ಕಾರ ನಿಗದಿಪಡಿಸಿದ ಗರಿಷ್ಠ ಬೆಲೆಯೊಳಗೆ ವಾಸ್ತವವಾಗಿ ದೊರಕುವುದಿಲ್ಲ. ಮೊಟ್ಟೆಗೆ ಸರ್ಕಾರ ಐದು ರೂ. ನೀಡುತ್ತದೆ. ಆದರೆ, ಮೊಟ್ಟೆಗೆ 5.40ರೂ.ದಿಂದ 6.90ರೂ.ವರೆಗೆ ದರ ವ್ಯತ್ಯಾಸವಾಗುತ್ತಲಿದೆ. ಉಳಿದ ಹಣವನ್ನು ಶಿಕ್ಷಕರು ಭರಿಸಬೇಕಾಗಿದೆ. ಜತೆಗೆ ಮೊಟ್ಟೆ, ಬಾಳೆಹಣ್ಣು ಸಂಗ್ರಹಿಸಿಡಲು ಶಾಲೆಯಲ್ಲಿ ದಾಸ್ತಾನು ವ್ಯವಸ್ಥೆಯಿಲ್ಲ. ಇದರಿಂದ ನಿತ್ಯವೂ ಖರೀದಿ ಮಾಡಿಕೊಂಡು ಬರುವುದು ಮುಖ್ಯ ಶಿಕ್ಷಕರಿಗೆ ಅಧಿಕ ಹೊರೆಯಾಗುತ್ತಿದೆ. ನಿಗದಿತ ತೂಕ ಹಾಗೂ ಗುಣಮಟ್ಟದ ಮೊಟ್ಟೆ ವಿತರಿಸಲು ಪೂರೈಕೆದಾರರ ನಿರಾಕರಿಸುತ್ತಾರೆ. ಈ ಹೆಚ್ಚುವರಿ ಕಾರ್ಯದಿಂದ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹಿನ್ನಡೆಯಾಗುತ್ತಿದೆ. ಆದ್ದರಿಂದ ಮೊಟ್ಟೆ, ಬಾಳೆಹಣ್ಣು, ಶೇಂಗಾಚಿಕ್ಕಿ ಪೂರೈಸಲು ಖಾಸಗಿ ಏಜೆನ್ಸಿಗಳಿಗೆ ನೀಡುವ ಮೂಲಕ ಶಿಕ್ಷಕರಿಗೆ ಹೆಚ್ಚುವರಿ ಕೆಲಸವನ್ನು ತಪ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶಿಕ್ಷಕರಾದ ಪ್ರದೀಪ ಕುಲಕರ್ಣಿ, ಕೆ.ಕೆ. ಕರವಿನಕೊಪ್ಪ, ಶೀಲಾ ರಾಠೋಡ, ಎಂ.ಎಸ್. ಕಾರ್ಕಳ, ರಮೇಶ ಅಂಬಿಗೇರ, ಪ್ರಕಾಶ ಬಾಳಮ್ಮನವರ, ಎಸ್.ಸಿ. ಬಸನಗೌಡ್ರ, ಸುಭಾಸ ಡೋರಿ, ಸುರೇಶ ಪೂಜಾರ ಇತರರಿದ್ದರು.