

ಮುಂಡಗೋಡ: ಬದುಕಿನಲ್ಲಿ ಕಷ್ಟದಲ್ಲಿರುವ ಅಂಗವಿಕರಿಗೆ ಪರಿಹಾರ ಮತ್ತು ಅವಕಾಶ ನೀಡಿ ಅವರೆಲ್ಲರೂ ಮುಖ್ಯವಾಹಿನಿಗೆ ಬರಬೇಕು. ಅವರಿಗೆ ಜೀವನದಲ್ಲಿ ಕೀಳರಿಮೆ ಬರಬಾರದೆಂದು ಸರ್ಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅನುದಾನದಲ್ಲಿ ಅಂಗವಿಕಲರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ ಮತ್ತು ಸಾಧನ ಸಲಕರಣೆ ವಿತರಿಸಿ ಅವರು ಮಾತನಾಡಿದರು. ಶಾಸಕರ ಪರಿಹಾರ ನಿಧಿಯಿಂದ ನಾನು ಕಳೆದ 13-14 ವರ್ಷಗಳಲ್ಲಿ 296 ಜನ ಅಂಗವಿಕಲರಿಗೆ ಮೋಟಾರ್ ಸೈಕಲ್ ವಿತರಿಸಿದ್ದೇನೆ ಎಂದರು.
ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತೆಗೆದುಕೊಂಡು ಹೋಗಲು ಸರ್ಕಾರ ಮತ್ತು ಸಮಾಜ ನಮ್ಮ ಜೊತೆ ಇರುವ ವಿಶ್ವಾಸ ಅವರಲ್ಲಿ ಬರಬೇಕು. ಆ ಆತ್ಮವಿಶ್ವಾಸದಿಂದಲೇ ಅವರು ಬದುಕನ್ನು ಗೆಲ್ಲಬೇಕಾಗಿದೆ ಎಂದರು.
ತಾಲೂಕಿನ 127 ಅಂಗವಿಕಲ ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸಲಾಯಿತು.
ಮಾಜಿ ಶಾಸಕ ವಿ.ಎಸ್. ಪಾಟೀಲ, ಪಪಂ ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ತಹಸೀಲ್ದಾರ್ ಶಂಕರ ಗೌಡಿ, ತಾಪಂ ಇಒ ಟಿ.ವೈ.ದಾಸನಕೊಪ್ಪ ಇತರರಿದ್ದರು.