ಅಂಗವಿಕಲರಿಗೆ ಅನುಕಂಪಕ್ಕಿಂತ ಅವಕಾಶ ಸಿಗಲಿ: ಲೇಖಕ ಟಿ.ಸತೀಶ್ ಜವರೇಗೌಡ

13
Published on

ಮೈಸೂರು: ಅಂಗವಿಕಲರಿಗೆ ಅನುಕಂಪ ತೋರುವ ಬದಲಿಗೆ ಅವರ ಪ್ರತಿಭೆಯ ವಿಕಾಸಕ್ಕೆ ಅವಕಾಶ ಕಲ್ಪಿಸುವುದು ತುಂಬ ಮುಖ್ಯ ಎಂದು ಲೇಖಕ ಟಿ.ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.

ಅಕ್ಷ ಭಾರತ್ ಮಿಷನ್‌ನಿಂದ ಕುವೆಂಪುನಗರದ ಆಶಾದೀಪ ವಿಕಲಚೇತನರ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಗವಿಕಲರಲ್ಲೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ಆದರೆ ಅವರಲ್ಲಿ ಸಾಕಷ್ಟು ಜನರಿಗೆ ಸೂಕ್ತ ವೇದಿಕೆ, ಅವಕಾಶಗಳೇ ಇರುವುದಿಲ್ಲ. ಕವಿಗಳು, ಕಲಾವಿದರು, ಗಾಯಕರು, ಕ್ರೀಡಾಪಟುಗಳೂ ಇದ್ದು, ಪ್ರತಿಭೆಯನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುವ ಕಾರ್ಯವನ್ನು ಸಂಘ-ಸಂಸ್ಥೆಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಕನ್ನಡದ ಬಗ್ಗೆ ನಿರ್ಲಕ್ಷ್ಯ ಮನೋಭಾವ ಬೆಳೆಯುತ್ತಿದೆ. ಇಂಗ್ಲಿಷ್ ಕುರಿತು ವ್ಯಾಮೋಹ ವ್ಯಸನವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಕುರಿತು ಪ್ರೀತಿ ಮತ್ತು ಅಭಿಮಾನ ಬೆಳೆಸುವ ಕೆಲಸ ಮಾಡಬೇಕು. ಈ ದಿಕ್ಕಿನಲ್ಲಿ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದರು.

ಕನ್ನಡ ನಮ್ಮ ಮಾತೃಭಾಷೆ. ಅದರ ಮೂಲಕ ಪರಿಣಾಮಕಾರಿಯಾದ ಮೌಖಿಕ ಮತ್ತು ಲಿಖಿತ ಅಭಿವ್ಯಕ್ತಿ ಸಾಧ್ಯ. ಆದ್ದರಿಂದ ಕನ್ನಡದ ಮೂಲಕ ನಿರಂತರ ಸಂವಹನ ಮಾಡಿದರೆ, ಕನ್ನಡ ನೆಲದಲ್ಲಿ ಅದು ಹೆಚ್ಚು ಲೋಕೋಪಕಾರಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಲೇಖಕ ರಾಮಣ್ಣ ತಟ್ಟಿ ಮಾತನಾಡಿ, ಎಲ್ಲವೂ ಚೆನ್ನಾಗಿ ಇರುವವರು ಏನನ್ನೂ ಸಾಧನೆ ಮಾಡುತ್ತಿಲ್ಲ. ಆದರೆ ಅಂಗವಿಕಲರಲ್ಲಿ ಹಲವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಆದ್ದರಿಂದ ಅಂಗವಿಲಕರ ಸಾಧನೆಗೆ ನಾವು ನೆರವಾಗಬೇಕು ಎಂದರು.

ಅಂಧ ಲೇಖಕ ಸಾಹಿತಿ ಜಯಾನಂದ್ ಟೋಪುಗೋಳ ಮಾತನಾಡಿ, ಅಂಗವಿಕಲರಿಗೆ ಅನುಕಂಪ ಬೇಡ. ಬದಲಿಗೆ ಅವಕಾಶ ಸೃಷ್ಟಿಸಿಕೊಡಿ. ಇನ್ನೂ ಸಮಾಜ ಮತ್ತು ಸರ್ಕಾರ ನಮ್ಮ ನೋಡುವ ದೃಷ್ಟಿಕೋನ ಬದಲಾಯಿಸಿಕೊಂಡಿಲ್ಲ. ಇದನ್ನು ಹೋಗಲಾಡಿಸುವ ಕೆಲಸವನ್ನು ಸಾಹಿತಿಗಳು ಮಾಡಬೇಕು ಎಂದು ಮನವಿ ಮಾಡಿದರು.

ಹಾಸನದ ಆರೋಗ್ಯ ಇಲಾಖೆಯ ಅಂಧ ನೌಕರ ಎಚ್.ಕೆ. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಆಶಾದೀಪ ವಿಕಲಚೇತನರ ತರಬೇತಿ ಕೇಂದ್ರದ ಸಂಸ್ಥಾಪಕರಾದ ಗುರುಸ್ವಾಮಿ, ರಂಗಸ್ವಾಮಿ, ಉಪನ್ಯಾಸಕ ಮುರಳಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂಪನ್ಮೂಲ ಶಿಕ್ಷಕ ಎಸ್.ಎ.ಹರೀಶ್ ಇತರರು ಇದ್ದರು.

ಕಾರ್ಯಕ್ರಮದಲ್ಲಿ ವಿಜಯಪುರದ ಅಂಧ ಗಾಯಕ, ಲೇಖಕ ಸೀಪುತ್ರ ಜಿ. ಮೋಟಗೆ ಅವರನ್ನು ಸನ್ಮಾನಿಸಲಾಯಿತು. ಅಂಗನವಾಡಿ ಶಿಕ್ಷಕಿ ಜ್ಯೋತಿ ನಾಗಮಂಗಲ ಸ್ವರಚಿತ ಕವನ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net