

ಶಿಗ್ಗಾಂವಿ: ಇಂದಿನ ಆಧುನಿಕತೆಯ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ದಿನದಿಂದ ದಿನಕ್ಕೆ ಮರೆಯಾಗುತ್ತಿವೆ. ಯುವ ಪೀಳಿಗೆಗೆ ಧರ್ಮ ಜಾಗೃತಿ, ಧರ್ಮ ಬೋಧನೆ ಮಾಡುವ ಮೂಲಕ ಮಾನವ ಧರ್ಮ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪಿರ್ ಖಾದ್ರಿ ಹೇಳಿದರು.
ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ತಾಲೂಕಿನ ಬಿಸನಳ್ಳಿ ಗ್ರಾಮದ ಶ್ರೀಕ್ಷೇತ್ರ ಕಾಶಿ ಜಂಗಮವಾಡಿ ಶಾಖಾ ಮಠದ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ ಪಾಠಶಾಲೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಾನವ ಧರ್ಮ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಕುಚಿತ ಭಾವನೆಗಳಿಂದ ಮನುಷ್ಯ ಮುಕ್ತನಾಗಿ, ಬಂಧುತ್ವ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಮಾನವ ಧರ್ಮ ಜಾಗೃತಿಯಿಂದ ಅಂತರಂಗ, ಬಹಿರಂಗಗಳ ಶುದ್ಧಿ ಜತೆಗೆ ಮಾನವ ಜೀವನ ಉಜ್ವಲಗೊಳ್ಳಲಿದೆ. ಮಾನವನ ಒಳಿತಿಗಾಗಿ ಬಿಸನಳ್ಳಿ ಗ್ರಾಮದಲ್ಲಿರುವ ಕಾಶಿಯ ಶಾಖಾ ಮಠದ ಧರ್ಮ ಜಾಗೃತಿ ಮೂಡಿಸುವ ಕಾರ್ಯಗಳು ಸ್ಮರಣೀಯ ಎಂದು ಶ್ಲಾಘಿಸಿದರು.
ಹಿರೇಮಣಕಟ್ಟಿ ಮುರುಘೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಜಾಥಾದ ನೇತೃತ್ವ ವಹಿಸಿದ್ದರು. ಪುರಸಭೆ ಸದಸ್ಯ ರಮೇಶ ವನಹಳ್ಳಿ, ಫಕೀರಜ್ಜ ಕುಂದೂರ, ರವಿ ಕೊಣಪ್ಪನವರ, ಯಲ್ಲಪ್ಪ ಅಂದಲಗಿ, ಶಿವಣ್ಣ ಗಂಜೀಗಟ್ಟಿ, ಬಿಸನಳ್ಳಿ ಕಾಶಿ ಮಠದ ಪಾಠಶಾಲೆ ಮಕ್ಕಳಿದ್ದರು.