

ಮುಳಗುಂದ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಧಗ್ರಾಯೋ ಮೂಲಕ ಸಿಗುವ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಂಘದ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ವೈದ್ಯ ಡಾ.ಎಸ್.ಸಿ. ಚವಡಿ ಹೇಳಿದರು.
ಇಲ್ಲಿನ ಗವಿಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮುಳಗುಂದ ವಲಯದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ಲಕ್ಷ್ಮೀ ಪೂಜೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಕ್ಷಾಂತರ ಮಹಿಳೆಯರ ಸ್ವಾವಲಂಬನೆ ಬದುಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ನೆರವಾಗಿದೆ. ಮಹಿಳೆಯರಿಗೆ ಬ್ಯಾಂಕಿನ ವ್ಯವಹಾರ ನಿರ್ವಹಿಸುವ ಜ್ಞಾನವನ್ನು ನೀಡಿದೆ ಎಂದರು.
ಯೋಜನೆಯ ಶಿರಹಟ್ಟಿ ತಾಲೂಕು ಯೋಜನಾಧಿಕಾರಿ ಪುನೀತ್ ಓಲೇಕಾರ ಮಾತನಾಡಿ, ಮುಳಗುಂದ ವಲಯದಲ್ಲಿ ಪ್ರಸ್ತುತ ವರ್ಷದಲ್ಲಿ 257 ಸಂಘಗಳಿಗೆ 47. 26 ಲಕ್ಷ ಲಾಭಾಂಶ ವಿತರಣೆ ಮಾಡಲಾಗಿದೆ. ಜ್ಞಾನ ವಿಕಾಸ ಯೋಜನೆಯಡಿ ಫಲಾನುಭವಿಗಳಿಗೆ ಮಾಸಾಶನ, ವಾತ್ಸಲ್ಯ ಕಿಟ್, ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ವಿತರಿಸಲಾಗಿದೆ. ಕುಡಿಯುವ ನೀರಿಗಾಗಿ ಶುದ್ಧಗಂಗಾ ಘಟಕ ಸ್ಥಾಪಿಸಲಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಸಿ. ಬಡ್ನಿ ಕಾರ್ಯಕ್ರಮ ಉದ್ಘಾಟಿಸಿದರು. ಬಿಎಂಎಸ್ ಸೇವಾ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯ ವಿಜಯ ನೀಲಗುಂದ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ. ಸುಂಕಾಪೂರ, ಜನ ಜಾಗೃತಿ ವೇದಿಕೆ ಸದಸ್ಯ ಪ್ರಕಾಶ ಮದ್ದಿ, ಮೇಲ್ವಿಚಾರಕಿ ಶಾಂತಾ ಬಿ., ಹಾಗೂ ಪ್ರಗತಿ ಬಂಧು ಸಂಘಗಳ ಒಟ್ಟೂಟದ ಸದಸ್ಯರು ಇತರರಿದ್ದರು.
ಶಿವಾನಂದ ಹುಣಸಿಮರದ ಕಾರ್ಯಕ್ರಮ ನಿರೂಪಿಸಿದರು. ಫಲಾನುಭವಿಗೆ ಆರೋಗ್ಯ ರಕ್ಷಾ ಹಾಗೂ ಲಾಭಾಂಶ ಚೆಕ್ ವಿತರಿಸಲಾಯಿತು.