

ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಡಾ. ವೀರೇಂದ್ರ ಹೆಗ್ಗಡೆ ಅವರು ಸಮಾಜಕ್ಕೆ ಕೊಟ್ಟಂತ ಕೊಡುಗೆಗಳು ಅಪಾರವಾಗಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಜಿಪಂ ಮಾಜಿ ಸದಸ್ಯೆ ಸುಮಂಗಲಾ ವಸಂತ ನಾಯ್ಕ ಹೇಳಿದರು.
ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿದ್ದಾಪುರ ತಾಲೂಕು ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಭಾನುವಾರ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭವೃದ್ಧಿ ಯೋಜನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರುವ ಯಾವುದೇ ಸಂದೇಶಗಳ ಬಗ್ಗೆ ಕಿವಿಕೊಡಬೇಡಿ ಎಂದು ಹೇಳಿದರು.
ಸಿದ್ದಾಪುರ ಎಸ್ಬಿಐ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಮನ್ಸೂರು ಎನ್.ಎಂ. ಹಾಗೂ ಉಪವ್ಯವಸ್ಥಾಪಕ ಶ್ರೀರಾಮ ಅವರು ಬ್ಯಾಂಕಿನ ಸಾಲ ಸೌಲಭ್ಯಗಳ, ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬ್ಯಾಂಕ್ ನಡುವಿನ ಒಪ್ಪಂದದ ಕುರಿತು, ಬ್ಯಾಂಕಿನಲ್ಲಿ ಹೇಗೆ ವ್ಯವಹಾರ ಮಾಡಬೇಕು ಎನ್ನುವ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಅವರು ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸುಭಾಸ್ ನಾಯ್ಕ ಕಾನ್ಸೂರು, ಶಂಕರ ಭಟ್ಟ ಸಿದ್ದಾಪುರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿಯವರ ಹಾಗೂ ವಿವಿಧ ಬ್ಯಾಂಕಿನ ಉನ್ನತ ಅಧಿಕಾರಿಯವರ ಜತೆ ನಡೆದ ವಿಡಿಯೋ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ 60 ಒಕ್ಕೂಟಗಳ ಪದಾಧಿಕಾರಿಗಳಿದ್ದರು.
ತಾಲೂಕು ಯೋಜನಾಧಿಕಾರಿ ಗಿರೀಶ ಜಿ.ಪಿ, ಸ್ವಾಗಿತಿಸಿ ತಾಲೂಕು ಸಾಧನಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕೃಷಿ ಮೇಲ್ವಿಚಾರಕ ಮಹಾದೇವ ಕಾರ್ಯಕ್ರಮ ನಿರ್ವಹಿಸಿದರು. ವಲಯ ಮೇಲ್ವಿಚಾರಕಿ ನಾಗರತ್ನ ವಂದಿಸಿದರು.