

ನರಗುಂದ: ಹಾನಗಲ್ಲ ಕುಮಾರಸ್ವಾಮಿಗಳು ವೀರಶೈವ ಮಹಾಸಭಾ ಸ್ಥಾಪಿಸುವ ಮೂಲಕ ಸ್ವಸ್ಥ ಸಮಾಜದ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ಜೋಳಿಗೆ ಹಾಕಿ ಭಿಕ್ಷೆ ಬೇಡಿದ್ದಾರೆ. ಸರ್ಕಾರ ಎಲ್ಲ ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯಧನ, ಉನ್ನತ ಶಿಕ್ಷಣ, ಕೌಶಲ ತರಬೇತಿ, ವಸತಿ ನಿಲಯಗಳ ಸ್ಥಾಪನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮತ್ತು ವಿವಿಧ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಅರ್ಹರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಚೆನ್ನಯ್ಯ ಸಂಗಳಮಠ ಹೇಳಿದರು.
ನರಗುಂದ ತಾಲೂಕು ಅಖಿತ ಭಾರತ ವೀರಶೈವ ಮಹಾಸಭಾದ ಯುವ ಘಟಕ, ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಕುರಿತು ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹಾನಗಲ್ಲ ಕುಮಾರ ಸ್ವಾಮೀಜಿಯವರ ಆಸೆಯಂತೆ ಸಮಾಜದ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂಘಟನಾತ್ಮಕವಾಗಿ ಸಂಸ್ಕಾರಯುತ ಧಾರ್ವಿುಕ ಕಾರ್ಯಗಳೊಂದಿಗೆ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಮುನ್ನುಡಿ ಬರೆಯಬೇಕಾಗಿದೆ ಎಂದರು. ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಪ್ಪ ಗುಡಿಯವರ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ತಾಲೂಕಿನ ಪದಾಧಿಕಾರಿಗಳನ್ನು ಶೀಘ್ರ ಆಯ್ಕೆ ಮಾಡುವ ಮೂಲಕ ಸಮಾಜದ ವಿವಿಧ ಸಂಘಟನಾತ್ಮಕ ಅಭಿವೃದ್ಧಿ ಕೆಲಸ, ಕಾರ್ಯಗಳಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಘರಾಜೇಂದ್ರ ಬದ್ನಿ, ಕೋಶಾಧ್ಯಕ್ಷ ಚೆನ್ನವೀರ ಹುಣಸೀಕಟ್ಟಿ, ತಾಲೂಕಾಧ್ಯಕ್ಷ ಅಪ್ಪಣಗೌಡ ನಾಯ್ಕರ, ಶ್ರೀಶೈಲ ಚಳ್ಳಕೇರಿ, ಚನ್ನಬಸಪ್ಪ ಕಂಠಿ ಮಾತನಾಡಿದರು. ಅನಿಲ ಧರಿಯಣ್ಣವರ, ಸತೀಶ ಅಂಗಡಿ, ಉಮೇಶ ಹಿರೇಮಠ, ವಿಜಯಕುಮಾರ ಬೇಲೇರಿ, ಈರಣ್ಣ ಹೊಂಗಲ, ಪುರಸಭೆ ಸದಸ್ಯ ರಾಚನಗೌಡ ಪಾಟೀಲ, ಶಂಕರಗೌಡ ಪಾಟೀಲ, ಬಸವರಾಜ ನೆಗಳೂರ, ಎಂ.ಎಸ್. ಪಾಟೀಲ, ಚನ್ನು ನಂದಿ ಇತರರು ಇದ್ದರು.