

ಹನೂರು: ಅರ್ಹರು ಅಗತ್ಯ ದಾಖಲೆ ಸಲ್ಲಿಸುವ ಮೂಲಕ ಸರ್ಕಾರದಿಂದ ಸಿಗುವ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಗ್ರೇಡ್ 2 ತಹಸೀಲ್ದಾರ್ ಧನಂಜಯ ತಿಳಿಸಿದರು.
ತಾಲೂಕಿನ ಗಾಣಿಗಮಂಗಲ ಗ್ರಾಮದಲ್ಲಿ ಶನಿವಾರ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪಿಂಚಣಿ ಅದಾಲತ್ ಆಯೋಜಿಸಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳಾದ ವಿಕಲಚೇತನ, ವೃದ್ಧಾಪ್ಯ, ವಿಧವಾ ವೇತನ, ಮನಸ್ವಿನಿ, ಮೈತ್ರಿ ಯೋಜನೆಯಡಿ ಅರ್ಹ ಫಲಾನುಭವಿಗಳು ಸರ್ಕಾರದಿಂದ ಮಾಸಿಕ ಪಿಂಚಣಿ ಪಡೆಯಬಹುದಾಗಿದೆ. ಇದರ ಸೌಕರ್ಯವನ್ನು ಪಡೆಯದವರು ಕೂಡಲೇ ಅರ್ಜಿ ಸಲ್ಲಿಸಿ ಸದುಪಯೋಗಪಡೆಯಬಹುದು ಎಂದು ತಿಳಿಸಿದರು.
ಇದೇ ವೇಳೆ ಕೆಲವರು ವಯಸ್ಸಿನ ಆಧಾರದ ಮೇಲೆ ಪಿಂಚಣಿ ಹಣವನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಗ್ರಾಮ ಆಡಳಿತಾಧಿಕಾರಿ ಕುಮಾರ್ ಅವರಿಗೆ ಸೂಚಿಸಲಾಯಿತು. ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಮಾದೇಶ್, ಗ್ರಾಪಂ ಸದಸ್ಯೆ ಮಹದೇವಮ್ಮ, ಮುಖಂಡರಾದ ನಾಗೇಂದ್ರ, ಮಹದೇವ, ರಾಜು ಇದ್ದರು.