

ದೇವದುರ್ಗ: ಕಾಲಕಾಲಕ್ಕೆ ವೈದ್ಯರ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವ ಗರ್ಭಿಣಿಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಆರೋಗ್ಯವಂತ ತಾಯಿಗೆ ಆರೋಗ್ಯವಂತ ಮಗು ಜನಿಸಲು ಸಾಧ್ಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ ಹೇಳಿದರು.
ಪಟ್ಟಣದ ಜನತಾ ಕಾಲನಿ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಗ್ರಾಮೀಣ ಆರೋಗ್ಯ ಪೌಷ್ಟಿಕ ದಿನಾಚರಣೆಯಲ್ಲಿ ಬುಧವಾರ ಮಾತನಾಡಿದರು.
ಗರ್ಭಿಣಿಯರು ಒಂದೂವರೆ ತಿಂಗಳಲ್ಲಿ ಅಂಗನವಾಡಿ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿ, ಟಿಡಿ ಚುಚ್ಚುಮದ್ದು ಪಡೆಯಬೇಕು. ನಂತರ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಗರ್ಭಿಣಿ ಸಮಯದಲ್ಲಿ ಕಬ್ಬಿಣಾಂಶದ 180 ಮತ್ತು ಕ್ಯಾಲ್ಸಿಯಂ 360 ಮಾತ್ರೆಯನ್ನು ತೆಗೆದುಕೊಳ್ಳಬೇಕು. ಪೌಷ್ಟಿಕ ಆಹಾರವಾದ ಹಸಿಸೊಪ್ಪು, ತರಕಾರಿಗಳು, ಹಣ್ಣುಗಳು, ಮೊಳಕೆ ಭರಿಸಿದ ಕಾಳುಗಳು, ಸೇಂಗಾ ಬೆಲ್ಲ, ಮೊಟ್ಟೆ ತಿನ್ನಬೇಕು. ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಸೇವಿಸಬೇಕು. ಹೆರಿಗೆ ದಿನಾಂಕ ಮುನ್ನ ಆಸ್ಪತ್ರೆಗೆ ದಾಖಲಾಗಬೇಕು. ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿಕೊಳ್ಳಬೇಕು. ಆಗ ತಾಯಿ ಮರಣ ಮತ್ತು ಶಿಶುಮರಣವನ್ನು ತಗ್ಗಿಸಬಹುದು ಎಂದರು.