ಸಂಸ್ಕೃತಿ-ಸಂಸ್ಕಾರ ಕನ್ನಡವಾಗಿರಲಿ

Let the culture and tradition be Kannada.
ಜಮಖಂಡಿಯ ವೀರೇಶ್ವರ ಪ್ರಕಾಶನ ಆಯೋಜಿಸಿದ್ದ ಸನ್ಮಾನ, ಬೋಧನಾ ಪರಿಣತ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಸಮಾರಂಭವನ್ನು ಬೆಳಗಾವಿಯ ಕಾಡಾ ಉಪ ಆಡಳಿತಾಧಿಕಾರಿ ಪ್ರಶಾಂತ ಹನಗಂಡಿ ಉದ್ಘಾಟಿಸಿದರು. ಡಾ. ಎಚ್.ಜಿ. ದಡ್ಡಿ, ಡಾ.ಸಂಗಮೇಶ ಮಟೋಳಿ, ಡಾ.ಟಿ.ಪಿ. ಗಿರಡ್ಡಿ ಮತ್ತಿತರರು ಇದ್ದಾರೆ.
Published on

ಜಮಖಂಡಿ: ಎರಡು ಸಾವಿರಕ್ಕಿಂತಲೂ ಅಧಿಕ ಇತಿಹಾಸವಿರುವ ಕನ್ನಡ ಭಾಷೆ ಒಪ್ಪಿಕೊಂಡವರನ್ನು ನಮ್ಮ ಭಾಷೆ ಅಪ್ಪಿಕೊಳ್ಳುತ್ತದೆ ಎಂದು ಬೆಳಗಾವಿ ಕಾಡಾ ಉಪ ಆಡಳಿತಾಧಿಕಾರಿ ಪ್ರಶಾಂತ ಹನಗಂಡಿ ಹೇಳಿದರು.

ನಗರದ ಜ್ಞಾನ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ವೀರೇಶ್ವರ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ಸಾಹಿತ್ಯ ಸೌರಭ ವೇದಿಕೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕುಗಳ ಪದವಿ ಪೂರ್ವ ಕಾಲೇಜುಗಳ ಹಾಗೂ ಪ್ರೌಢಶಾಲೆಗಳ 2024-25ನೇ ಸಾಲಿನಲ್ಲಿ ಕನ್ನಡ ವಿಷಯದಲ್ಲಿ ಪ್ರತಿಶತ 100 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಕನ್ನಡ ಉಪನ್ಯಾಸಕರು, ಶಿಕ್ಷಕರ ಸನ್ಮಾನ, ಬೋಧನಾ ಪರಿಣತ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿಕಾ ಮಾಧ್ಯಮ ಯಾವುದೇ ಇದ್ದರೂ ಸಂಸ್ಕೃತಿ ಮತ್ತು ಸಂಸ್ಕಾರ ಕನ್ನಡವಾಗಿರಲಿ ಎಂದರು.

ಹೃದಯರೋಗ ತಜ್ಞ, ನಾಡೋಜ ಡಾ. ಎಚ್.ಜಿ. ದಡ್ಡಿ ಮಾತನಾಡಿ, ಅಂಕ ಗಳಿಸುವುದು, ಪದವಿ ಪಡೆಯುವುದು ಮತ್ತು ಉದ್ಯೋಗ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ವಿದ್ಯಾರ್ಥಿಗಳ ಕಲಿಕೆ ಸೀಮಿತಗೊಳಿಸದೆ ಮೂಲ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮಕ್ಕಳಲ್ಲಿ ತುಂಬಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಓಲೆಮಠದ ಆನಂದ ದೇವರು ಶ್ರೀಗಳು ಮಾತನಾಡಿ, ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ುಲೆ ಇಂದಿನ ಶಿಕ್ಷಕರಿಗೆ ಆದರ್ಶವಾಗಬೇಕು. ವಿದ್ಯಾರ್ಥಿಗಳ ಬದುಕಿಗೆ ಬಣ್ಣ ಕೊಡುವ ಶಿಕ್ಷಕರು ಕನ್ನಡ ಭಾಷೆಯನ್ನು ಉಳಿಸುವ ವಿದ್ಯಾರ್ಥಿಗಳನ್ನು ಬೆಳೆಸಬೇಕು ಎಂದು ಆಶೀರ್ವಚನ ನೀಡಿದರು.

ಯಲ್ಲಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಾನಂದ ಮರೆಗುದ್ದಿ, ಮಧುರಖಂಡಿ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ದುಂಡಯ್ಯ ಹಿರೇಮಠ ಮಾತನಾಡಿ, ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಕನ್ನಡ ಅಭಿಮಾನ ಕೇವಲ ವೃತ್ತಿಯಾಗಬಾರದು. ಬದಲಾಗಿ ಕನ್ನಡ ನೆಲ-ಜಲ-ಭಾಷೆಗೆ ಧಕ್ಕೆ ಬಂದಾಗ ಖಂಡಿಸುವ, ಪ್ರತಿಭಟಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಆ ಕುರಿತು ಅರಿವು ಮೂಡಿಸುವ ಕಾರ್ಯ ಶಿಕ್ಷಕರಿಂದ ನಡೆಯಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಡಾ. ಸಂಗಮೇಶ ಮಟೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ, ಜ್ಞಾನ ಗಂಗೋತ್ರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್.ಬಿ. ಹಿರೇಮಠ, ಅಮಿತ ಭೋಸಲೆ ಇದ್ದರು.

ಅಖಂಡ ಜಮಖಂಡಿ ತಾಲೂಕಿನ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರು, ಪ್ರೌಢಶಾಲೆಗಳ ಕನ್ನಡ ಶಿಕ್ಷಕರು ಸೇರಿ ಒಂದು ನೂರು ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ. ಎಸ್.ಎಸ್. ಖಾನಾಪುರ, ಶ್ರೀಶೈಲ ಎಂ. ತೇಲಿ, ಶ್ರೀದೇವಿ ಮಠಪತಿ ಅನಿಸಿಕೆ ಹಂಚಿಕೊಂಡರು.

ಶಂಕರ ಲಮಾಣಿ ಪ್ರಾರ್ಥಿಸಿದರು. ಕಸಾಪ ತಾಲೂಕು ಅಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿದರು. ಪ್ರೊ. ರಾಜಶೆಖರ ಹೊಸಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕ ಎನ್.ಬಿ. ಮಾಲಗಾರ, ಶಿಕ್ಷಕ ಚಿದಾನಂದ ಜಡಿಮಠ ನಿರೂಪಿಸಿದರು. ಪ್ರಾಧ್ಯಾಪಕಿ ಡಾ.ಶ್ರೀದೇವಿ ಸುವರ್ಣಖಂಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net