

ನಂಜನಗೂಡು: ಐಸಿಎಆರ್ ಹಾಗೂ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ತಾಲೂಕಿನ ಸುತ್ತೂರಿನಲ್ಲಿ ಸೋಮವಾರ ರೈತ ದಿನ ಆಚರಿಸಲಾಯಿತು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಗ್ರಾಮೀಣಾಭಿವೃದ್ಧಿ ನಿರ್ದೇಶಕ ಎನ್.ಎಂ.ಶಿವಶಂಕರಪ್ಪ ಮಾತನಾಡಿ, ಬೆಳೆ ಬೆಳೆಯುವ ಮುನ್ನ ರೈತರು ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಬೆಳೆ ಬೆಳೆದರೆ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಲಿದೆ. ಜತೆಗೆ ಕಾಲಕ್ಕೆ ಸರಿಯಾಗಿ ಬಿತ್ತನೆ, ಗೊಬ್ಬರ ಹಾಗೂ ಬೆಳೆ ನಿರ್ವಹಣೆ ಮಾಡಬೇಕೆಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ಹಿರಿಯ ವಿಜ್ಞಾನಿ ಎಚ್.ವಿ.ದಿವ್ಯಾ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಡಿ. 23ರಂದು ರೈತರ ದಿನ ಆಚರಿಸಲಾಗುತ್ತಿದೆ. ದೇಶದ ಜಿಡಿಪಿಯಲ್ಲಿ ಸುಮಾರು ಶೇ.20ರಷ್ಟು ಕೊಡುಗೆ ಕೃಷಿಯದ್ದಾಗಿದೆ. ಕೃಷಿ ವಲಯದಲ್ಲಿ ಆವಿಷ್ಕಾರಗೊಂಡ ನವೀನ ತಂತ್ರಜ್ಞಾನಗಳನ್ನು ರೈತರು ಅಳವಡಿಕೊಂಡು ಹೆಚ್ಚು ಲಾಭ ಗಳಿಸಬೇಕೆಂದು ತಿಳಿಸಿದರು.
ಕೃಷಿ ಹಾಗೂ ತೋಟಗಾರಿಕೆ ವಿಷಯಗಳ ಕುರಿತು ಶಾಮರಾಜು ಹಾಗೂ ಡಾ.ಜಿ.ಎಂ.ವಿನಯ್ ಸಂವಾದ ನಡೆಸಿದರು. ಔಷಧ ಸಸ್ಯಗಳ ಬೇಸಾಯ ಕ್ರಮ ಹಾಗೂ ಬೇಡಿಕೆ ಕುರಿತಂತೆ ಪ್ರಗತಿಪರ ರೈತ ತಳೂರು ಯೋಗೀಶ್ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಪ್ರಗತಿಪರ ರೈತರಾದ ಬಿಳಿಗೆರೆ ಗುರುಲಿಂಗೇಗೌಡ, ನಗರ್ಲೆ ಗುರುಸ್ವಾಮಿ, ಡಾ.ಜಿ.ಎಂ. ವಿನಯ್ , ಡಾ.ವೈ.ಪಿ.ಪ್ರಸಾದ್, ಡಾ.ಯು.ಎಂ.ರಕ್ಷಿತ್ ರಾಜ್ ಇದ್ದರು.