

ಅಥಣಿ: ದಿನಬಳಕೆ ವಸ್ತುಗಳ ದರ ಏರುತ್ತಿದೆ. ಆದರೆ, ರೈತರು ಬೆಳೆದ ಬೆಳೆಗಳಿಗೆ 10 ವರ್ಷದಿಂದ ಒಂದೇ ದರ ಇದೆ. ಹಾಗಾಗಿ ಬೆಳೆಗಳಿಗೆ ಯೋಗ್ಯ ಬೆಲೆ ನೀಡಬೇಕು ಎಂದು ರೈತ ಮುಖಂಡ ಸಂಪತಕುಮಾರ ಶೆಟ್ಟಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬೆಳೆಗಳಿಗೆ ಯೋಗ್ಯ ಬೆಲೆ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶನಿವಾರ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.
ಸರ್ಕಾರ ಶೀಘ್ರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯಿಂದ 3,500 ಹಾಗೂ ಸರ್ಕಾರದಿಂದ 1,000 ರೂ. ಸೇರಿ ಸಾಗಣೆ, ಕಟಾವು ಹೊರತುಪಡಿಸಿ ಒಟ್ಟು 4,500 ರೂ. ರೈತರಿಗೆ ಕೊಡಬೇಕು. ಕಬ್ಬು ಪೂರೈಸಿದ 14 ದಿನಗಳ ಒಳಗಾಗಿ ಹಣ ಸಂದಾಯ ಆಗಬೇಕು. ಬಾಕಿಬಿಲ್ ಶೀಘ್ರ ನೀಡಬೇಕು. ಪ್ರತಿ ಕಾರ್ಖಾನೆ ಆವರಣದಲ್ಲಿ ಸರ್ಕಾರದಿಂದ ಡಿಜಿಟಲ್ ತೂಕದ ಯಂತ್ರ ಅಳವಡಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಶಶಿಕಾಂತ ಗುರುಜಿ, ಮಲ್ಲಪ್ಪ ಅಂಗಡಿ, ಎಂ.ಸಿ.ತಾಂಬೂಳಿ, ಮುರಗೇಶ ಅರ್ಜನಗಿ, ಡಿ.ಎಂ.ನಾಯಿಕ, ಶಿವಾನಂದ ಖೋತ, ರಮೇಶ ಕಲ್ಲೂರ, ಬಾಬಾಸಾಹೇಬ ಪಾಟೀಲ, ಧರೆಪ್ಪ ಮಂಗಳೂರ, ಉತ್ತಮ ನದಾಫ್ ಇತರರಿದ್ದರು.