

ಕೊಪ್ಪ: ಪಟ್ಟಣದ ಪಿಕಾರ್ಡ್ ಬ್ಯಾಂಕ್ ರೈತರನ್ನು ತಿಂಗಳಿಗೆ ನಾಲ್ಕು ಬಾರಿ ಕೋರ್ಟ್‌ಗೆ ಅಲೆಯುವಂತೆ ಮಾಡಿದೆ. ಸಂಕಷ್ಟದಲ್ಲಿರುವ ರೈತರನ್ನು ಕೋರ್ಟ್‌ಗೆ ಅಲೆಯುವಂತೆ ಮಾಡಿರುವುದು ಅಕ್ಷಮ್ಯ ಅಪರಾಧ. ಕೋರ್ಟ್‌ನಲ್ಲಿರುವ ಕೇಸ್‌ಗಳನ್ನು ಹಿಂಪಡೆಯಬೇಕು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ವಿಜೇಂದ್ರ ಎ.ಜಿ. ಕಟ್ಟೆ ಒತ್ತಾಯಿಸಿದರು.
ಬಲವಂತವಾಗಿ ಮತ್ತು ನ್ಯಾಯಾಲಯದ ಮೂಲಕ ಸಾಲ ವಸೂಲಿ ಮಾಡದಂತೆ ಒತ್ತಾಯಿಸಿ ಬುಧವಾರ ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ರೈತ ಹೋರಾಟ ಸಮಿತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬೆಳೆಗಳಗೆ ರೋಗ, ಬೆಳೆ ನಷ್ಟದಿಂದ ರೈತರು ಬ್ಯಾಂಕ್‌ಗೆ ನಿಗದಿತ ಅವಧಿಯಲ್ಲಿ ಸಾಲ ಮತ್ತು ಬಡ್ಡಿ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಸಮಸ್ಯೆ ಅರಿತಿದ್ದರೂ ಸುಸ್ತಿದಾರರಿಂದ ಸಾಲ ವಸೂಲಿಗೆ ಮುಂದಾಗಿದ್ದಾರೆ. ಜತೆಗೆ ನ್ಯಾಯಾಲಯದಲ್ಲಿ ದಾವೆ ಹೂಡಿ ವಸೂಲಾತಿಗೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಡಕೆ ಹಳದಿ ಎಲೆರೋಗ, ಎಲೆಚುಕ್ಕೆ ರೋಗ, ಬೇರು ರೋಗ ಮುಂತಾದ ಸಮಸ್ಯೆಯಿಂದ ರೈತರ ಜೀವನ ದುಸ್ತರವಾಗಿದೆ. ಬ್ಯಾಂಕ್‌ನಿಂದ ಕೋರ್ಟ್ ಮೂಲಕ ನಡೆಸುತ್ತಿರುವ ಕೇಸ್‌ಗಳನ್ನು ಹಿಂಪಡೆದು, ರೈತರಿಗೆ ಮುಂದಿನ ಹಂಗಾಮಿನಿನವರೆಗೆ ಅಸಲು ಪಾವತಿಸಲು ಅವಕಾಶ ನೀಡಿ ಬಡ್ಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್ ಮಾತನಾಡಿ, ಸಾಲ ವಸೂಲಾತಿಯಲ್ಲಿ ಸರ್ಕಾರದ ಆದೇಶ ಪಾಲಿಸಿದ್ದೇವೆ. ರೈತರು ಕೊಟ್ಟ ಮನವಿಯನ್ನು ಕೇಂದ್ರ ಬ್ಯಾಂಕ್‌ಗೆ ಕಳುಹಿಸಲಾಗುತ್ತದೆ ಎಂದರು.
ಕೇಶವ, ಪ್ರಮೋದ್ ಗುಣವಂತೆ, ಸುಜಯ್, ಮಹಮ್ಮದ್ ಹುಸೇನ್, ಪುಟ್ಟಪ್ಪ ತಲಕಾನೆ, ರಮೇಶ್ ಅಸಗೋಡು, ನಾಗರಾಜ್ ಬೇರುಕೊಡಿಗೆ ಇತರರಿದ್ದರು.