ದಂಪತಿ ಪರಸ್ಪರ ಅರಿತು ಬೆರೆತು ಬದುಕಲಿ

20 SRS 3
Published on

ಶಿರಸಿ: ಪರಸ್ಪರ ಹೊಂದಾಣಿಕೆಯಿಂದ ದಂಪತಿ ಗೃಹಸ್ಥಾಶ್ರಮ ಧರ್ಮ ನಿಭಾಯಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಸ್ವರ್ಣವಲ್ಲೀ ಮಠದಲ್ಲಿ ಆಯೋಜಿಸಿದ್ದ ಧನ್ಯೋಗೃಹಸ್ಥಾಶ್ರಮ ದಂಪತಿ ಶಿಬಿರದಲ್ಲಿ ಸಾನ್ನಿಧ್ಯ ವಹಿಸಿ ನವ ದಂಪತಿಗೆ ಹಿತವಚನ ಬೋಧಿಸಿದರು.
ಕುಟುಂಬದಲ್ಲಿ ನನ್ನ ಮಾತೇ ನಡೆಯಬೇಕು ಎನ್ನುವ ಭಾವದಿಂದಲೇ ಬಹಳಷ್ಟು ಸಲ ಸಣ್ಣ ಸಣ್ಣ ವಿಷಯಗಳ ಕುರಿತು ಭಿನ್ನಾಭಿಪ್ರಾಯ ಉಂಟಾಗುತ್ತದೆ. ಇಂತಹ ಮನಸ್ಥಿತಿಯ ಬದಲಾಗಿ ಇಬ್ಬರೂ ಸ್ವಲ್ಪ ಹೊಂದಾಣಿಕೆ ಮನೋಭಾವದಿಂದ ಹೋದರೆ ಮಾತ್ರ ಗೃಹಸ್ಥಾಶ್ರಮ ಧನ್ಯತೆಯತ್ತ ಸಾಗುತ್ತದೆ. ಸಮಾಜದ ಆಧಾರ ಸ್ಥಂಭವಾದ ಗೃಹಸ್ಥ ಧರ್ಮದ ಆಚರಣೆ ಸರಿಯಾದ ರೀತಿಯಲ್ಲಿ ನಡೆದರೆ ಪ್ರತಿಯೊಂದು ಮನೆಯೂ ಧಾರ್ಮಿಕ ಕೇಂದ್ರವಾಗುತ್ತದೆ ಎಂದರು.

ಪ್ರತಿ ಮನೆಯೂ ಧಾರ್ಮಿಕ ಕೇಂದ್ರವಾದರೆ ವೈಯಕ್ತಿಕವಾಗಿಯೂ ಲಾಭ. ಸಮಾಜಕ್ಕೂ ಒಳಿತು. ಹಾಗಾಗಿ ಪ್ರತಿ ದಂಪತಿ ಪರಸ್ಪರ ಅರಿತು, ಬೆರೆತು ಬದುಕುವುದನ್ನು ಆಚರಣೆಗೆ ತಂದುಕೊಳ್ಳಬೇಕು ಎಂದರು.

ಪ್ರತಿಯೊಂದು ಮಗುವಿಗೂ ಉತ್ತಮ ಸಂಸ್ಕಾರ ನೀಡಿ ಬೆಳೆಸಿದರೆ ಮುಂದಿನ ಸಮಾಜ ಉತ್ತಮ ಸಂಸ್ಕಾರವಂತ ಸಮಾಜವಾಗುತ್ತದೆ. ಇಂತಹ ಸಮಾಜ ನಿರ್ಮಾಣ ಮಾಡಲು ಈಗಿನ ನವ ದಂಪತಿಗಳಿಗೆ ಅವಕಾಶ ಹೆಚ್ಚಿದೆ ಎಂದರು.

ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಶಿಬಿರ ಉದ್ಘಾಟಿಸಿದರು. ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಕಾರ್ಯನಿರ್ವಾಹಕ ಉಪಾಧ್ಯಕ್ಷ ನಾರಾಯಣ ಭಟ್ ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಮಾತೃ ಮಂಡಲ ಅಧ್ಯಕ್ಷೆ ಗೀತಾ ಹೆಗಡೆ ಶೀಗೆಮನೆ, ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ.ವಿ. ಹೆಗಡೆ ಹಾಗೂ ಪ್ರತಿಷ್ಠಾನದ ಕಾರ್ಯದರ್ಶಿ ತ್ರಯಂಬಕ ಹೆಗಡೆ ಉಪಸ್ಥಿತರಿದ್ದರು.

ಶಿಬಿರದಲ್ಲಿ ಡಾ. ವಿನಾಯಕ ಹೆಬ್ಬಾರ ಶಿರಸಿ, ಭ್ರೂಣಹತ್ಯೆಯ ದುಷ್ಪರಿಣಾಮಗಳು ಹಾಗೂ ಉತ್ತಮ ಸಂತಾನಕ್ಕೆ ಪೂರ್ವ ಸಿದ್ಧತೆಗಳು ಎಂಬ ವಿಷಯದ ಕುರಿತು, ವಿ. ಸೀತಾರಾಮ್ ಭಟ್ ಅವರು ಉತ್ತಮ ಸಂತಾನಕ್ಕೆ ಶಾಸ್ತ್ರ ಸೂತ್ರಗಳು ಎನ್ನುವ ವಿಷಯದ ಮೇಲೆ ಹಾಗೂ ವೇದಮೂರ್ತಿ ಅನಂತಮೂರ್ತಿ ಭಟ್ ಯಲೂಗಾರ ಅವರು ಬದುಕಿನ ಧನ್ಯತೆಯ ರಾಜಮಾರ್ಗ ಗೃಹಸ್ಥಾಶ್ರಮ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಸೀತಾರಾಮ ಭಟ್ ವೇದಘೋಷ ಗೈದರು. ರಮ್ಯಶ್ರೀ ಹೆಗಡೆ ಕಡಬಾಳ ಹಾಗೂ ಸೌಜನ್ಯ ಹೆಗಡೆ ಬಿಳಗಿ ಪ್ರಾರ್ಥಿಸಿದರು. ಶಿಬಿರ ಸಂಚಾಲಕ ವಿ.ಎಂ. ಹೆಗಡೆ ತ್ಯಾಗಲಿ ಶಿಂಗು ಉದ್ದೇಶ ವಿವರಿಸಿದರು. ಭವ್ಯ ಅಭಿಷೇಕ ಹೆಗಡೆ ನಿರ್ವಹಿಸಿದರು. ಹೇಮಲತಾ ಪ್ರಸಾದ ಹೆಗಡೆ ಕುಂಟೆಮನೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net