ಆಸ್ತಿ ತೆರಿಗೆ ಪಾವತಿ ಅವಧಿ ಪಾಲಿಕೆ ವಿಸ್ತರಿಸಲಿ

mysore city corporation
Published on

ಮೈಸೂರು: ಆಸ್ತಿ ತೆರಿಗೆ ಪಾವತಿಸುವ ಅವಧಿಯನ್ನು ಒಂದೂವರೆ ತಿಂಗಳು ವಿಸ್ತರಣೆ ಮಾಡಲು ಮೈಸೂರು ಮಹಾನಗರ ಪಾಲಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಆಗ್ರಹಿಸಿದ್ದಾರೆ.


2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಲೋಕಸಭಾ ಚುನಾವಣೆ, ಸರ್ವರ್ ಸಮಸ್ಯೆ ಕಾರಣಕ್ಕೆ ಸುಮಾರು 15 ದಿನ ಹಣ ಪಾವತಿ ಮಾಡಲು ಆಗಿಲ್ಲ. ಹೀಗಾಗಿ ಪರಿಣಾಮಕಾರಿಯಾಗಿ ಆಸ್ತಿ ತೆರಿಗೆ ಸಂಗ್ರಹವಾಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಆಸ್ತಿ ತೆರಿಗೆ ಪಾವತಿಸುವವರಿಗೆ ನೀಡಿದ್ದ ರಿಯಾಯಿತಿ ಸೌಲಭ್ಯ ಹಲವಾರು ಜನರು ಪಡೆಯಲು ಸಾಧ್ಯವಾಗಿಲ್ಲ. ಈ ಎಲ್ಲ ಕಾರಣದಿಂದಾಗಿ ಪಾವತಿಯ ಅವಧಿ ಇನ್ನೂ ಒಂದೂವರೇ ತಿಂಗಳು ವಿಸ್ತರಿಸಬೇಕೆಂದು ಒತ್ತಾಯಿಸಿದರು.


ಅನೇಕ ಆಸ್ತಿ ತೆರಿಗೆದಾರರು ರಿಯಾಯಿತಿ ಸೌಲಭ್ಯ ಪಡೆಯಲು ಪಾಲಿಕೆ ಕಚೇರಿ ಎದುರು ಗಂಟೆಗಟ್ಟಲೇ ಕಾದು ನಿಂತಿದ್ದರು. ಆದರೆ ಚುನಾವಣೆ ಕಾರಣ ಅಧಿಕಾರಿಗಳು ಅನ್ಯಕಾರ್ಯಕ್ಕೆ ನಿಯೋಜನೆಗೊಂಡಿದ್ದರಿಂದ ಹಾಗೂ ಸತತ 15 ದಿನ ಪಾಲಿಕೆ ವೆಬ್‌ಸೈಟ್ ಸರ್ವರ್ ಸಮಸ್ಯೆ ಎದುರಿಸಿದ್ದರಿಂದಾಗಿ ಹಲವರಿಗೆ ಈ ಸೌಲಭ್ಯ ಪಡೆಯಲಾಗಿಲ್ಲ.

ಹೀಗಾಗಿ ಪಾಲಿಕೆಯ ಆಡಳಿತಾಧಿಕಾಯಾಗಿರುವ ಪ್ರಾದೇಶಿಕ ಆಯುಕ್ತರು ಸರ್ಕಾರದೊಡನೆ ಸಮಾಲೋಚಿಸಿ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಆಗ ಮಾತ್ರ ಪಾಲಿಕೆಯ ಈ ಬಾರಿಯ ಆಸ್ತಿ ತೆರಿಗೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net