ವಿಜ್ಞಾನ ಅಭಿವೃದ್ಧಿಗೆ ಕಾರ್ಪೋರೇಟ್ ವಲಯ ಕೈಜೋಡಿಸಲಿ: ಸಚಿವ ಬೋಸರಾಜು ಕರೆ

science gallery
Published on

ಬೆಂಗಳೂರು: ಸುರಕ್ಷಿತ ಹಾಗೂ ಹೆಚ್ಚು ಸುಸ್ಥಿರ ಭವಿಷ್ಯದ ವಿಜ್ಞಾನದ ಶ್ರೇಯೋಭಿವೃದ್ಧಿಗಾಗಿ ಕಾರ್ಪೋರೇಟ್ ವಲಯ ಮುಂದಾಗಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖಾ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.

ನಗರದ ಪಶುವೈದ್ಯಕೀಯ ಆವರಣದಲ್ಲಿರುವ ಬೆಂಗಳೂರು ಸೈನ್ಸ್ ಗ್ಯಾಲರಿಯಲ್ಲಿ ಶನಿವಾರ ಆಯೋಜಿಸಿದ್ದ ‘ಸೈನ್ಸ್ - 560 ಪ್ರದರ್ಶನ’ವನ್ನು ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ-ತಂತ್ರಜ್ಞಾನದ ಅಡಿಪಾಯವನ್ನು ಸುಗಮಗೊಳಿಸಲು ಮತ್ತು ವಿಜ್ಞಾನ ವಲಯದ ಪ್ರವೇಶ, ಈ ಕ್ಷೇತ್ರ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ನಮ್ಮ ಪ್ರಯಾಣದಲ್ಲಿ ನಮಗೆ ಸಹಾಯ ಮಾಡಲು, ಸಂಯೋಜಿಸಲು ಮತ್ತು ಪಾಲುದಾರರಾಗಲು ಕಾರ್ಪೊರೇಟ್ ನಾಯಕರಿಗೆ ಆಹ್ವಾನ ನೀಡಲಾಗುವುದು ಎಂದರು.

ಬೆಂಗಳೂರಿನಲ್ಲಿ ವಿಜ್ಞಾನದ ಶ್ರೀಮಂತ ಇತಿಹಾಸವನ್ನು ಆಚರಿಸುವ ಮತ್ತು ಭವಿಷ್ಯದ ಆವಿಷ್ಕಾರಗಳನ್ನು ನಾವು ಎದುರು ನೋಡುತ್ತಿದ್ದೇವೆ. ನಗರದ ವಿಜ್ಞಾನದ ಯಶೋಗಾಥೆಯನ್ನು ಇನ್ನಷ್ಟು ಬರೆಯಲಾಗುವುದು. ಉತ್ತಮವಾದದ್ದು ಇನ್ನೂ ಬರಬೇಕಿದೆ. ಬೆಂಗಳೂರು ದೇಶದ ವೈಜ್ಞಾನಿಕ ಪಥವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇಂತಹ ಶ್ರೀಮಂತ ಇತಿಹಾಸದ ಆಚರಣೆಯ ಭಾಗವಾಗಿರುವುದು ಹೆಮ್ಮೆಯ ವಿಷಯ. ಇದು ನಮ್ಮ ನಗರವನ್ನಲ್ಲದೆ ರಾಷ್ಟ್ರದ ವೈಜ್ಞಾನಿಕ ಪಥವನ್ನು ರೂಪಿಸಿದೆ ಎಂ ಹರ್ಷ ವ್ಯಕ್ತಪಡಿಸಿದರು.

10 ಕೋಟಿ ರೂ. ಆವರ್ತ ನಿಧಿ:

ಈ ಪ್ರದರ್ಶನ ಕೋಲಾರ ಚಿನ್ನದ ಗಣಿ ನ್ಯೂಟ್ರಿನೊ ಪ್ರಯೋಗಗಳಿಂದ ಹಿಡಿದು ಎಚ್‌ಎಲ್​​ನಲ್ಲಿ ಮೊದಲ ದೇಶೀಯ ವಿಮಾನದ ಅಭಿವೃದ್ಧಿಯವರೆಗೆ ನಮ್ಮನ್ನು ಕರೆದೊಯ್ಯುತ್ತದೆ. ಇದು ಪ್ರಮುಖ ವೈಜ್ಞಾನಿಕ ಸಾಧನೆಗಳಲ್ಲಿ ನಗರದ ಪಾತ್ರವನ್ನು ಅನಾವರಣಗೊಳಿಸುತ್ತದೆ. ಇಂತಹ ಉತ್ತಮ ಪ್ರದರ್ಶನಗಳನ್ನ ಸೈನ್ಸ್ ಗ್ಯಾಲರಿಯಲ್ಲಿ ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ 10 ಕೋಟಿ ರೂ. ಆವರ್ತ ನಿಧಿ ನೀಡಿದೆ ಎಂದು ಸಚಿವ ಬೋಸರಾಜು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ-ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್ ಕೌರ್, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಸ್ ಸತ್ಯಾರ್ಥಿ, ಉದ್ಯಮಿ ಕಿರಣ್ ಮುಜುಂದಾರ್ ಷಾ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net