

ಶಿಗ್ಗಾಂವಿ: ಶೀಘ್ರವೇ ಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಉಪ ತಹಸೀಲ್ದಾರ್ ಎಂ. ಎಚ್. ಗಾಮನಗಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಬೆಂಬಲ ಬೆಲೆ ಯೋಜನೆ ಅಡಿ ರೈತರಿಂದ ಗುಣಮಟ್ಟದ ಜೋಳ ಖರೀದಿಸಲು ಸರ್ಕಾರ ಬಿಳಿ ಜೋಳಕ್ಕೆ 3225 ರೂ. ಹಾಗೂ ಹೈಬ್ರಿಡ್ ಜೋಳಕ್ಕೆ 3180 ರೂ. ನಿಗದಿಪಡಿಸಲಾಗಿದೆ. ಅಧಿಕಾರಿಗಳು ರೈತರಿಂದ ಕೇವಲ ಎಫ್ಐಡಿಯೊಂದಿಗೆ ಅರ್ಜಿಗಳನ್ನು ಪಡೆಯುತ್ತಿದ್ದಾರೆ. ರೈತರಿಂದ ಜೋಳ ಖರೀದಿ ಮಾಡುತ್ತಿಲ್ಲ. ಇದೀಗ ಕೆಲವೆಡೆ ಉತ್ತಮ ಮಳೆಯಾಗಿದ್ದು, ಬಿತ್ತನೆಗಾಗಿ ರೈತರು ಭೂಮಿಯನ್ನು ಹದಗೊಳಿಸಬೇಕಾಗಿದೆ. ಕಳೆದ ಸಾಲಿನ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಪಸ್ವಲ್ಪ ಬೆಳೆದ ಹಿಂಗಾರಿನ ಜೋಳದ ಬೆಳೆಯಿಂದಲೇ ಈಗಿನ ಮುಂಗಾರಿಗೆ ಸಜ್ಜಾಗಬೇಕಾಗಿದೆ. ಆದರೆ, ಇದುವರೆಗೂ ಜೋಳ ಖರೀದಿ ಮಾಡದೆ ಇರುವುದರಿಂದ ದಲ್ಲಾಳಿಗಳಿಗೆ ಕಡಿಮೆ ದರಕ್ಕೆ ಜೋಳ ಮಾರಾಟ ಮಾಡುವಂತಾಗಿದೆ.
ಕೆಲವು ತಿಂಗಳ ಹಿಂದೆ ತಾಲೂಕು ಆಡಳಿತ ಕೇಂದ್ರದಲ್ಲಿ ಜಿಲ್ಲಾಧಿಕಾರಿ ನಡೆಸಿದ ಜನ ಸಂಪರ್ಕ ಸಭೆಯಲ್ಲಿ ರೈತ ಸಂಘದ ಮುಖಂಡರೊಂದಿಗೆ ರೈತರ ಬೆಳೆಗಳನ್ನು ಖರೀದಿ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೂ ಕ್ರಮ ಕೈಗೊಂಡಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಮುಂದಿನ ಒಂದು ವಾರದೊಳಗಾಗಿ ಖರೀದಿ ಕೇಂದ್ರ ಪ್ರಾರಂಭಿಸಿದಿದ್ದರೆ ತಾಲೂಕು ಆಡಳಿತದ ಎದುರು ರೈತರೊಂದಿಗೆ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ರೈತ ಸಂಘ, ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಆನಂದ ಕೆಳಗಿನಮನಿ, ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಗಿರಿಧರಗೌಡ ಪಾಟೀಲ, ಚಂದ್ರಶೇಖರ ನರ್ತಿ, ರಾಜು ಸಂಶಿ, ಮಂಜುನಾಥ ಕಂಕಣವಾಡ, ದಯಾನಂದ ಮೆಣಸಿನಕಾಯಿ, ದೇವರಾಜ ಗೊಟಗೋಡಿ ಸೇರಿದಂತೆ ಅನೇಕರಿದ್ದರು.