

ಬಸವನಬಾಗೇವಾಡಿ: ಕಾಂಗ್ರೆಸ್ ಪಕ್ಷದವರಿಗೆ ವೀರಶೈವ ಲಿಂಗಾಯತರ ಮೇಲೆ ಅತಿಯಾದ ಪ್ರೀತಿಯಿದ್ದರೆ ಅಧಿಕಾರಕ್ಕೆ ಬಂದರೆ ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಘೋಷಿಸಲಿ ಎಂದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಚಿವ ಮುರುಗೇಶ ನಿರಾಣಿ ಸವಾಲು ಹಾಕಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಗುರುವಾರ ಮೆರವಣಿಗೆ ಮೂಲಕ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಎಸ್.ಕೆ. ಬೆಳ್ಳುಬ್ಬಿಯವರ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್‌ನವರು ಲಿಂಗಾಯತ ಸಮಾಜದವರಿಗೆ ಎಷ್ಟು ಬಾರಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಕೆಲವು ದಿನಗಳಿಗೆ ಮಾತ್ರ ವೀರೇಂದ್ರ ಪಾಟೀಲ ಅವರನ್ನು ಸಿಎಂ ಮಾಡಿದ್ದು ಬಿಟ್ಟರೆ ಬೇರೆ ಯಾರನ್ನು ಮಾಡಿಲ್ಲ. ಬಿಜೆಪಿ ಪಕ್ಷ ರಾಜ್ಯಕ್ಕೆ ಮೂವರು ಲಿಂಗಾಯತರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಎಲ್ಲ ಅಧಿಕಾರ ನೀಡಿತ್ತು. ಅವರಿಗೆ ಎಲ್ಲ ರೀತಿಯ ಗೌರವವನ್ನು ನೀಡಲಾಗಿತ್ತು. ಎಲ್ಲವನ್ನೂ ಅನುಭವಿಸಿ ತಮ್ಮ ಸ್ವಾರ್ಥ ಮತ್ತು ಅಧಿಕಾರದ ಆಸೆಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂದರು.
ಈ ಬಾರಿ ಸರಳ ಬಹುಮತದೊಂದಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ವಿತ. ಇದರಲ್ಲಿ ಎರಡು ಮಾತಿಲ್ಲ. ಬಿಜೆಪಿ ರಾಜ್ಯದ ಜನರ ಹಿತ ಕಾಯುತ್ತಾ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬೀರಪ್ಪ ಸಾಸನೂರ ಇತರರಿದ್ದರು.