ತಮ್ಮದು ತಾಲಿಬಾನಿ ಸರ್ಕಾರವೆಂದು ಕಾಂಗ್ರೆಸ್ ಘೋಷಿಸಲಿ

allwyn_280920_ctravi1
Published on

ನಾಗಮಂಗಲ; ಮಾನ ಮರ್ಯಾದೆ ಇದ್ದರೆ ಈ ಸರ್ಕಾರದವರು ನಮ್ಮದು ತಾಲಿಬಾನಿ ಸರ್ಕಾರ, ನಾವು ತಾಲಿಬಾನಿಗಳಿಗೆ ಬೆಂಬಲ ಕೊಡೊದು ಅಂತ ಹೇಳಲಿ. ನಂತರ ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದರು.


ಪಟ್ಟಣದಲ್ಲಿ ಕೋಮುಗಲಭೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಬಿಜಿಪಿ ನಿಯೋಗದೊಂದಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.
ನಮ್ಮದು ತಾಲಿಬಾನಿಗಳ ಸರ್ಕಾರ, ನಾವಿರೋದು ಅವರ ಬೆಂಬಲಕ್ಕಾಗಿ ಎಂದು ಹೇಳಿಕೊಳ್ಳಲಿ. ಶೇ.90ರಷ್ಟು ಹಿಂದುಗಳಿರುವಂತಹ ನಾಗಮಂಗಲದಂತಹ ಪ್ರದೇಶದಲ್ಲಿಯೂ ಇಂತಹ ಸಂಕಷ್ಟ ಬರುತ್ತಿದೆ ಎಂದರೆ ನಾವು ಎಲ್ಲಿದ್ದೀವಿ? ಎಂದು ಯೋಚಿಸಬೇಕಾಗುತ್ತದೆ. ಈ ಘಟನೆ ಪೂರ್ವನಿಯೋಜಿತ. ಗೃಹ ಸಚಿವರು ಈ ಘಟನೆಯನ್ನು ಸಣ್ಣ ಘಟನೆ ಎಂದು ಹೇಳಿಕೆ ನೀಡಿದ್ದಾರೆ. ಪೆಟ್ರೋಲ್ ಬಾಂಬ್ ಹಾಕಿ ಕೋಟ್ಯಂತರ ರೂ. ನಷ್ಟ ಮಾಡಿರೋದು, ಅಂಗಡಿಗಳು, ಬೈಕ್‌ಗಳನ್ನು ಸುಟ್ಟುಹಾಕಿರುವುದು ಅವರಿಗೆ ಸಣ್ಣ ಘಟನೆಯಾಗಿದೆ. ಇದನ್ನು ಅವರು ಯಾವ ಆಧಾರದಲ್ಲಿ ಸಣ್ಣ ಘಟನೆ ಎಂದು ಹೇಳುತ್ತಾರೆ? ಎಂದು ಜರಿದರು.
ಬೆಳ್ಳೂರಿನಲ್ಲಿ ಕೆಲ ತಿಂಗಳ ಹಿಂದೆ ದೇವರ ಉತ್ಸವದ ಸಂದರ್ಭದಲ್ಲಿ ಗಲಭೆ ನಡೆಸಿದ್ದರು. ಆಗ ಯಾವುದೇ ಕ್ರಮ ಜರುಗಿಸಿಲ್ಲ. ಈಗಿನ ರಾಜ್ಯ ಸರ್ಕಾರ ಮತಾಂಧರಿಗೆ ಬೆಂಬಲ ಕೊಡುವ ಕೆಲಸ ಮಾಡುತ್ತಿದೆ. ಆದ್ದರಿಂದಲೇ ಮುಸ್ಲಿಂ ಸಮುದಾಯದ ಕೆಲವರು ಈ ರೀತಿ ವರ್ತಿಸುತ್ತಿರುವುದು. ನಷ್ಟ ಆಗಿರುವ ಎಲ್ಲರಿಗೂ ನಷ್ಟವನ್ನು ಸರ್ಕಾರ ಭರಿಸಿಕೊಡಬೇಕು. ಈ ಘಟನೆಯಲ್ಲಿ ಹಿಂದುಗಳಿಗೂ ಅನ್ಯಾಯವಾಗಿದೆ, ಮುಸ್ಲಿಂರಿಗೂ ಅನ್ಯಾಯವಾಗಿದೆ ಎಂದು ಖಾಜಿ ನ್ಯಾಯ ಮಾಡದೆ, ಯಾರೂ ಗಲಭೆ ಸೃಷ್ಟಿ ಮಾಡಿದ್ದಾರೆ? ಅಲ್ಲದ ಪೆಟ್ರೋಲ್ ಬಾಂಬ್ ಹಾಕಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ಮೆರವಣಿಗೆ ಮಾಡಿದವರು, ಗಣಪತಿ ಪ್ರತಿಷ್ಠಾಪನೆ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸುವುದು ಯಾವ ಕಾನೂನಿನಲ್ಲಿದೆ? ಪೊಲೀಸರ ಮುಂದೆಯೇ ಎರಡು- ಮೂರು ಬಾರಿ ಬೆಂಕಿ ಹಾಕುತ್ತಾರೆ ಎಂದರೆ ಯಾರೂ ಇವರ ಮೇಲೆ ವಿಶ್ವಾಸವಿಡುತ್ತಾರೆ ಆಕ್ರೋಶ ವ್ಯಕ್ತಪಡಿಸಿದರು.

ಗೃಹಸಚಿವರು ಸ್ಥಳಕ್ಕೆ ಬಂದು ನೋಡಿಲ್ಲ. ಅವರ ಮನೆಗೆ ಬೆಂಕಿ ಬಿದ್ದಾಗ ಮಾತ್ರ ಅವರಿಗೆ ದೊಡ್ಡ ಘಟನೆ ಆನಿಸುತ್ತದೆ. ಈ ಘಟನೆ ಕುರಿತಾಗಿ ಸಮಗ್ರ ತನಿಖೆಯಾಗಬೇಕು. ಇಲ್ಲವಾದರೆ ಜನರೇ ಕಾನೂನನ್ನು ಕೈಗೆತ್ತಿಕೊಂಡರೆ ಯಾರೂ ರಕ್ಷಣೆ ಮಾಡುತ್ತಾರೆ ನೋಡೋಣ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net