ಕಾಂಗ್ರೆಸ್​ ದೇಶದ ಜನರ ಕ್ಷಮೆಯಾಚಿಸಲಿ

25 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಧಾನಮಂತ್ರಿ ಇಂದಿರಾ ಗಾಂಧಿ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಜನರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದರು. ತರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅವಮಾನ ಮಾಡಿರುವ ಕಾಂಗ್ರೆಸ್​ ಪಕ್ಷ ದೇಶದ ಜನರ ಕ್ಷಮೆ ಕೇಳಬೇಕು ವಿಧಾನ ಪರಿಷತ್​ ವಿಪಕ್ಷ ಮುಖ್ಯ ಸಚೇತ ಎನ್​. ರವಿಕುಮಾರ ಒತ್ತಾಯಿಸಿದರು.
ನಗರದ ಕೆಸಿಡಿ ಸೃಜನಾ ರಂಗಮಂದಿರಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಮತ್ತು ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್​ನ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಯನ್ನು ದೇಶದ ಜನರು ಎಂದೂ ಮರೆಯಲು ಸಾಧ್ಯವಿಲ್ಲ. ಇದಕ್ಕಾಗಿ ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್​ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು ಎಂದರು.
ಬಿ.ಆರ್​.ಅಂಬೇಡ್ಕರ್​ ರಚಿಸಿದ ಸಂವಿಧಾನವನ್ನು ಮೂಲೆಗೆ ತಳ್ಳಿ ಸರ್ವಾಧಿಕಾರಿ ಧೋರಣೆ ಪ್ರದಶಿರ್ಸಿದ್ದ ಇಂದಿರಾ ಗಾಂಧಿ ದೇಶದಲ್ಲಿ ತಡರಾತ್ರಿ ತುರ್ತು ಪರಿಸ್ಥಿತಿ ಘೋಷಿಸಿದರು. ನ್ಯಾಯಾಂಗ ವ್ಯವಸ್ಥೆಯನ್ನು ತಮ್ಮ ಮುಷ್ಟಿಗೆ ತೆಗೆದುಕೊಂಡಿದ್ದಲ್ಲದೆ, ಸಂವಿಧಾನದ 40ನೇ ತಿದ್ದುಪಡಿ ಮಾಡುವ ಮೂಲಕ ತುರ್ತು ಪರಿಸ್ಥಿತಿಯನ್ನು ಮಾಧ್ಯಮಗಳು ಪ್ರಶ್ನೆ ಮಾಡದಂತೆ ನಿರ್ಬಂಧ ಹೇರಲಾಯಿತು. ಪ್ರಶ್ನೆ ಮಾಡಿದ 253ಕ್ಕೂ ಹೆಚ್ಚು ಪತ್ರಕರ್ತರನ್ನು ಬಂಧಿಸಲಾಯಿತು. ಹೀಗಾಗಿ ಈ ಸಮಯವನ್ನು ಎಂದಿಗೂ ಮರೆಯಲಾಗದು ಎಂದರು.
ಮಹೇಂದ್ರ ಕೌತಾಳ ಮಾತನಾಡಿ, ಸಂವಿಧಾನಕ್ಕೆ ಅಪಚಾರ ಎಸಗಿ ತುರ್ತು ಪರಿಸ್ಥಿತಿ ಹೇರಿದ್ದೇ ಕಾಂಗ್ರೆಸ್​. ಆದರೆ ಇದೀಗ ಅದೇ ಪಕ್ಷದ ನಾಯಕರು ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕ ಡಾ. ಧನವಂತ ಹಾಜವಗೋಳ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್​ ಮಾಜಿ ಸದಸ್ಯ ಡಿ.ಎಸ್​. ವೀರಯ್ಯ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಸದಸ್ಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net