ಹೊಂದಾಣಿಕೆ ರಾಜಕಾರಣ ಕೊನೆಗಾಣಲಿ; ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ

Pratap Simha
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಯೊಂದಿಗೆ ರಾಜ್ಯದಲ್ಲಿರುವ ಹೊಂದಾಣಿಕೆ ರಾಜಕಾರಣ ಕೊನೆಗಾಣಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.


ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಸ್ವಾಗತಿಸಿದರು.


ಈ ಪ್ರಾಸಿಕ್ಯೂಷನ್ ಮೂಲಕ ಹೊಂದಾಣಿಕೆ ರಾಜಕಾರಣ ನಿಂತು ಸ್ವಚ್ಛ ರಾಜಕಾರಣ ಮಾಡಲು ವೇದಿಕೆ ಸಿದ್ಧವಾಗಲಿ. ಕಾಂಗ್ರೆಸ್ ಕೂಡ ಬಿಜೆಪಿ ವಿರುದ್ಧ ಎಲ್ಲ ಹಗರಣಗಳ ಆರೋಪಗಳ ತನಿಖೆಗೆ ಆದೇಶ ಮಾಡಲಿ. ಈ ಮೂಲಕ ಹೊಂದಾಣಿಕೆ ರಾಜಕಾರಣ ಕೊನೆಯಾಗಲಿ ಎಂದು ಹೇಳಿದರು.


ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ವಿರುದ್ಧ ನೂರು ಆರೋಪ ಮಾಡಿತ್ತು. ಒಂದಾದರೂ ತನಿಖೆಯನ್ನು ಸಿದ್ದರಾಮಯ್ಯ ಮಾಡಿಸಿದ್ದಿರಾ? ಯಾವ ಹಗರಣದ ಬಗ್ಗೆಯೂ ಸಣ್ಣ ತನಿಖೆ ಆಗಿಲ್ಲ. ದೊಡ್ಡ ದೊಡ್ಡವರು ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ. ಕಾರ್ಯಕರ್ತರನ್ನು ಮಂಗ್ಯಾ ಮಾಡಲು ಹೇಳಿಕೆಗಳ ಮೇಲಾಟ ನಡೆಸುತ್ತಾರೆಯಷ್ಟೇ ಎಂದು ಹೇಳಿದರು.


ಸೈಟ್ ವಾಪಸ್ ಕೊಟ್ಟು ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂಬ ನನ್ನ ಕಾಳಜಿ ಅಂದು ಸಿಎಂಗೆ ಅರ್ಥವಾಗಲಿಲ್ಲ. ಹೀಗಾಗಿ ಗಂಡಾಂತರ ಮೈಮೇಲೆ ಎಳೆದುಕೊಂಡರು ಎಂದರು.


ಹವಾಲಾ ಹಗರಣದಲ್ಲಿ ಎ.ಕೆ.ಅಡ್ವಾಣಿ ಹೆಸರು ಬಂದ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಪ್ರಾಸಿಕ್ಯೂಷನ್‌ಗೆ ಆದೇಶವಾದ ಕಾರಣ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟರು. ಕೇಜ್ರಿವಾಲ್ ಈಗ ಜೈಲಿನಿಂದಲೇ ಆಡಳಿತ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯಾವ ಹಾದಿ ಆಯ್ದುಕೊಳ್ಳುತ್ತಾರೋ ನೋಡೋಣ ಎಂದರು

.
ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಡಮ್ಮಿ ಅಭ್ಯರ್ಥಿ ಹಾಕಿದ್ದು ನಾವೇ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಅವತ್ತು ನಡೆದಿದ್ದು ಹೊಂದಾಣಿಕೆ ರಾಜಕಾರಣ ತಾನೇ ಎಂದು ಜರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net