

ಶಹಾಬಾದ್: ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ.ಇರುವುದೊಂದೆ ಭೂಮಿ. ಭೂಮಿಯ ಮೇಲೆ ಮಾತ್ರ ಜೀವಿಗಳು ಬದುಕಲು ಸಾಧ್ಯವಾಗಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೇಲ್ಲರ ಪ್ರಥಮ ಆದ್ಯಯಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ಶಿಕ್ಷಕ ಸಿದ್ಧಲಿಂಗ ಬಾಳಿ ರಾವೂರ ಹೇಳಿದರು.
ಅವರು ಶನಿವಾರ ಮಾಲಗತ್ತಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ, ಮಾನವನ ಅತಿಯಾಸೆಯಿಂದ ಇಂದು ಅಮೂಲ್ಯವಾದ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಇದರಿಂದ ಪ್ರಕೃತಿಯಲ್ಲಿ ಅಸಮತೊಲನ ಉಂಟಾಗುತ್ತಿದೆ. ಆದ್ದರಿಂದ ಪ್ರತಿಯೊಂದು ದಿನವೂ ನಮಗೆ ಪರಿಸರ ದಿನವಾಗಬೇಕು. ಹೆಚ್ಚು ಹೆಚ್ಚು ಸಸಿಗಳನ್ನು ನೆಡಬೇಕು.ಅವುಗಳ ಪೋಷಣೆ ಮಾಡಿ ಬೆಳೆಸಬೇಕು. ಬೆಳೆದ ಮರಗಳು ನಮಗೆ ಆಮ್ಲಜನಕ,ನೆರಳು,ಹಣ್ಣು ನೀಡುವುದರೊಂದಿಗೆ ಮಣ್ಣಿನ ಸವೆತವನ್ನು ತಡೆಗಟ್ಟುತ್ತದೆ. ಇಂದು ಪರಿಸರದ ಮೇಲೆ ಆಗುತ್ತಿರುವ ನಾನಾ ದಾಳಿಗಳಿಂದ ಪರಿಸರದಲ್ಲಿ ಸಾಕಷ್ಟು ಮಾಲಿನ್ಯಗಳು ಉಂಟಾಗುತ್ತಿವೆ. ಇರುವುದೊಂದೆ ಭೂಮಿಯಾಗಿರುವುದರಿಂದ ನಾವು ಬದುಕಲು ಪರಿಸರವನ್ನು ರಕ್ಷಣೆ ಮಾಡೋಣವೆಂದರು.
ಧರ್ಮಸ್ಥಳ ಸಂಸ್ಥೆಯ ಭಂಕೂರ ವಲಯ ಮೇಲ್ವಿಚಾರಕ ಆನಂದ ಬಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಳ್ಳುತ್ತಿರುವ ವಿವಿಧ ಯೋಜನೆಗಳು ಮತ್ತು ಫಲಾನುಭವಿಗಳ ಆಯ್ಕೆ ವಿಧಾನವನ್ನು ವಿವರಿಸಿದರು.
ಸಂಸ್ಥೆಯ ಪರಿಸರ ಯೋಜನೆ ಮೇಲ್ವಿಚಾರಕ ಕೃಷ್ಣಾರೆಡ್ಡಿ ಹಾಗೂ ಶಾಲೆಯ ಶಿಕ್ಷಕ ಚಿದಾನಂದ ಕುಡ್ಡನ್ ಮಾತನಾಡಿದರು. ಸಂಸ್ಥೆಯ ವತಿಯಿಂದ 50ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನೆಡಲಾಯಿತು. ಮತ್ತು ಅವುಗಳ ಪೋಷಣೆಗೆ ಮಕ್ಕಳನ್ನು ಒಂದೊAದು ಗಿಡಕ್ಕೆ ದತ್ತು ನೀಡಲಾಯಿತು.
ಮುಖ್ಯಗುರು ಶಕುಂತಲಾ ಪಾಟೀಲ, ಶಿಕ್ಷಕರಾದ ಅನೀಲಕುಮಾರ, ರಾಜಕುಮಾರ, ಅಶೋಕ ಚವ್ಹಾಣ,ಶಿವಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.