

ಇಳಕಲ್ಲ(ಗ್ರಾ): ಬಾಲ್ಯ ವಿವಾಹದ ಹೆಸರಿನಲ್ಲಿ ಬಾಲಕಿಯರ ಕನಸುಗಳನ್ನು ನುಚ್ಚು ನೂರು ಮಾಡುವ ಕೆಲಸ ನಡೆದಿದ್ದು, ಅದನ್ನು ತಡೆಗಟ್ಟುವ ಕೆಲಸವನ್ನು ಸಾಂತ್ವನ ಕಚೇರಿಗಳು ಮಾಡಬೇಕು ಎಂದು ಸಮಾಜ ಸೇವಾ ಕಾರ್ಯಕರ್ತೆ ಸಾವಿತ್ರಿ ಆಚಾರ್ಯ ಹೇಳಿದರು.
ಆಶಾದೀಪ ಅಂಗವಿಕಲರ ಸಂಸ್ಥೆಯ ಮಹಿಳಾ ಸಾಂತ್ವನ ಕೇಂದ್ರದ ವತಿಯಿಂದ ಎಸ್‌ವಿಎಂ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಬಾಲ್ಯವಿವಾಹ ಮತ್ತು ಪೋಕ್ಸೋ ಕಾಯಿದೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನ್ಯಾಯವಾದಿ ವಿಶಾಲಾಕ್ಷಿ ಮಾತನಾಡಿ, ಸಖಿ ಒನ್ ಸ್ಟಾಪ್ ಸೆಂಟರ್ ಮೂಲಕ ಬಾಲಕಿಯರ ಮೇಲಾಗುವ ದೌರ್ಜನ್ಯ ತಡೆಯಲು ಎಲ್ಲರೂ ಪ್ರಯತ್ನಿಸಬೇಕು ಎಂದರು.
ಆಡಳಿತಾಧಿಕಾರಿ ಶಂಕ್ರಮ್ಮ ಜಮ್ಮನಕಟ್ಟಿ ಮಾತನಾಡಿ, ಬಾಲ್ಯವಿವಾಹಗಳು ಮಕ್ಕಳ ಬಾಲ್ಯವನ್ನು ಕಸಿದು ಕೊಳ್ಳುತ್ತಾವೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುಮಂಗಲಾ ಹಿರೇಮನಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಬಸವರಾಜ ಸುಗ್ಗಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.