ಕಾಲೇಜ್ ಶೌಚಾಲಯಕ್ಕೆ ಹಂತಕನ ಹೆಸರಿಡಲಿ

h25-Advocate Neha House 1
Published on

ಹುಬ್ಬಳ್ಳಿ: ಶಿಕ್ಷಣ ಸಂಸ್ಥೆಯೊಂದು ತಮ್ಮ ಕಾಲೇಜ್ ಕಟ್ಟಡಕ್ಕೆ ನೇಹಾ ಹೆಸರಿಡುವ ಅಗತ್ಯವಿಲ್ಲ. ಅಲ್ಲಿನ ಶೌಚಾಲಯಕ್ಕೆ ಹಂತಕ ಫಯಾಜ್‌ನ ಹೆಸರಿಡಲಿ ಎಂದು ಹಿಂದು ವಕೀಲರ ವೇದಿಕೆ ಆಗ್ರಹಿಸಿದೆ.
ಮೃತ ನೇಹಾಳ ನಿವಾಸಕ್ಕೆ ಗುರುವಾರ ಭೇಟಿ ಕೊಟ್ಟು, ಅವಳ ತಂದೆ-ತಾಯಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ವೇದಿಕೆಯ ಸಂಚಾಲಕ ಅಶೋಕ ಅಣವೇಕರ ಮಾತನಾಡಿದರು.
ಯಾರು ಕೂಡ ಹಂತಕನ ಪರ ವಕಾಲತ್ತು ವಹಿಸಬಾರದು. ಮೃತ ನೇಹಾಳ ಕುಟುಂಬದವರಿಗೂ ಅನಾಮಿಕರಿಂದ ಜೀವ ಬೆದರಿಕೆ ಇದೆ. ಪೊಲೀಸರು ನೇಹಾ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದರು.
ನೇಹಾ ಕೊಲೆ ಪ್ರಕರಣದ ತನಿಖೆಯಲ್ಲಿ ಸರ್ಕಾರ ನಿರ್ಲಕ್ಷೃ ವಹಿಸಿದೆ. ಹತ್ಯೆಯಾದ ಆರು ದಿನಗಳ ನಂತರ ಸ್ಥಳ ಮಹಜರು ಮಾಡಲಾಗಿದೆ. ಸಾಕ್ಷ್ಯ ನಾಶವಾದ ಬಳಿಕ ಮಹಜರು ಮಾಡಿದರೆ ಏನು ಉಪಯೋಗ? ಈಗಲಾದರೂ ಸಮರ್ಪಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ವ್ಯತಿರಿಕ್ತ ಹೇಳಿಕೆ ನೀಡಿ ಅಲ್ಪಸಂಖ್ಯಾತರ ಓಲೈಕೆಗೆ ಯತ್ನಿಸಿದ್ದಾರೆ. ಮೃತಳ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡದಿರುವುದನ್ನು ವೇದಿಕೆ ಖಂಡಿಸುತ್ತದೆ. ಅಲ್ಪಸಂಖ್ಯಾತರ ತುಷ್ಟೀಕರಣ ಕೈಬಿಡಬೇಕು. ಇಲ್ಲವಾದರೆ ಇಂತಹ ಸರ್ಕಾರಕ್ಕೆ ಸಮಾಜವು ತಕ್ಕಪಾಠ ಕಲಿಸಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net