

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆಗ್ರಹಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಹೀಗಾಗಿ, ರಾಜೀನಾಮೆ ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದೇ ಸಿದ್ದರಾಮಯ್ಯ ಅವರು ನಿವೇಶನ ವಾಪಸ್ ನೀಡಬೇಕಿತ್ತು. ನಿವೇಶನ ವಾಪಸ್ ನೀಡಿದ್ದರೆ ಈಗ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಸಿಎಂ ಮುಂದಿಟ್ಟುಕೊಂಡು ಮುಡಾ ಹಗರಣದಲ್ಲಿ ಭಾಗಿಯಾಗಿರುವ ಹಲವರು ಪಾರಾಗಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಗುಡುಗಿದರು.
ಪ್ರಾಸಿಕ್ಯೂಷನ್‌ಗೆ ನೀಡುವ ಬಗ್ಗೆ ಕಾಂಗ್ರೆಸ್‌ಗೆ ತಿಳಿದಿತ್ತು. ಆದ್ದರಿಂದ ಶುಕ್ರವಾರ ಕೆಪಿಸಿಸಿ ವಕ್ತಾರರ ಮೂಲಕ ಸುದ್ದಿಗೋಷ್ಠಿ ನಡೆಸಲಾಗಿದೆ ಎಂದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಅಸಂಸ್ಕೃತ ಪದ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಲಕ್ಷ್ಮಣ್ ಅವರು ಒಂದು ರಾಷ್ಟ್ರೀಯ ಪಕ್ಷದ ವಕ್ತಾರರಾಗಿದ್ದಾರೆ. ಲಂಗು ಲಗಾಮು ಇಟ್ಟುಕೊಂಡು ಮಾತನಾಡಬೇಕು.
ನನ್ನ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾರೆ. ಟ್ರೋಲ್ ಮಾಡಿರುವವರ ಬಗ್ಗೆಯೂ ಮಾತನಾಡಿದ್ದಾರೆ. ನನ್ನ ವಿರುದ್ಧ ಅಸಂಬದ್ಧ ಪದ ಬಳಕೆ ಮಾಡಿರುವುದು ಸರಿಯಲ್ಲ. ಮುಂದೆ ಈ ರೀತಿ ಮಾತನಾಡದಂತೆ ವಕೀಲರ ಮೂಲಕ ನೋಟಿಸ್ ನೀಡಲಾಗುವುದು ಎಂದು ಹೇಳಿದರು.
ಬಿಜೆಪಿ ವಕ್ತಾರ ಎಂ.ಎ.ಮೋಹನ್ ಮಾತನಾಡಿ, ಸತ್ಯಕ್ಕೆ ಯಾವತ್ತಿದ್ದರೂ ಜಯ ಸಿಕ್ಕೇ ಸಿಗುತ್ತದೆ. ಮುಡಾ ಹಗರಣದ ಬಗ್ಗೆ ಶಾಸಕ ಶ್ರೀವತ್ಸ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು ಎಂದರು.