

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವುದರಿಂದ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ ಮುಡಾ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಒತ್ತಾಯಿಸಿದರು.
ಮುಡಾ ಹಗರಣದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವಾದರೆ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ತಮ್ಮದು 40 ವರ್ಷಗಳ ಕಳಂಕರಹಿತ ರಾಜಕಾರಣ ಎನ್ನುತ್ತಾರೆ ಸಿದ್ದರಾಮಯ್ಯ. ಹಾಗಾದರೆ ‘ರೀಡೂ’ ಪಿತಾಮಹ ಯಾರು? ರೀಡೂ ಹೆಸರಿನಲ್ಲಿ 884 ಎಕರೆ ಡಿನೋಟಿಫೈಕೇಷನ್ ಮಾಡಿರುವುದು ಅಕ್ರಮ ಅಲ್ಲವೇ? ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದರೆ ತಮ್ಮ ನೈತಿಕತೆ ಕಳೆದುಕೊಳ್ಳುತ್ತಾರೆ ಎಂದರು.
ಮುಡಾ ಹಾಗೂ ವಾಲ್ಮೀಕಿ ನಿಗಮದ ಅಕ್ರಮಗಳು ಹಾಗೂ ರಾಜ್ಯ ಸರ್ಕಾರ ಪ್ರತಿ ಹುದ್ದೆಗೂ ರೇಟ್ ಕಾರ್ಡ್ ನಿಗದಿ ಮಾಡಿ ವರ್ಗಾವಣೆ ಮಾಡುತ್ತಿರುವುದು ಸರ್ಕಾರ ಹಾಗೂ ಅರದ ನೇತೃತ್ವ ವಹಿಸಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಂಟಿದ ಕಳಂಕ. ಬೆಂಗಳೂರಿನಲ್ಲಿ ಪ್ರತಿ ಅಡಿಗೂ 100 ರೂ. ಲಂಚ ಕೊಡಬೇಕು. ಸಾರ್ವಜನಿಕ ಬದುಕು ಸ್ವಚ್ಛವಾಗಿದ್ದರೆ ಮಾತ್ರ ಕಳಂಕರಹಿತ ಆಡಳಿತ ಎನ್ನಬಹುದು. ಆದರೆ, ಸಿದ್ದರಾಮಯ್ಯ ಅವರ ಸಾರ್ವಜನಿಕ ಬದುಕಿನಲ್ಲಿ ಸ್ವಚ್ಛತೆ ಎಲ್ಲಿದೆ? ಎಂದು ಪ್ರಶ್ನಿಸಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಹಗರಣಗಳನ್ನು ಮುಚ್ಚಿಹಾಕಲು ಲೋಕಾಯುಕ್ತವನ್ನು ದುರ್ಬಲಗೊಳಿಸಿದರು ಎಂದು ಆರೋಪಿಸಿದರು.
ಕೆಸರೆ ಸರ್ವೇ ನಂ.464ರ ಜಾಗ 1997ರಲ್ಲಿ ನೋಟಿಫಿಕೇಷನ್ ಆಗಿತ್ತು. 1998ರಲ್ಲಿ ಡಿನೋಟಿಫಿಕೇಷನ್ ಹೇಗಾಯ್ತು ? ನೋಟಿಫಿಕೇಷನ್ ಆಗಿರುವ ಜಾಗ ಡಿನೋಟಿಫೈ ಆಗಲ್ಲ. ಡಿನೋಟಿಫಿಕೇಷನ್ ಮಾಡಿದ ಪ್ರಭಾವಿ ಯಾರು ? ಆಗ ನೀವು ಉಪಮುಖ್ಯಮಂತ್ರಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಿರಿ. ನೀವು ಪ್ಲ್ಯಾನ್ ಮಾಡಿಯೇ ಅಭಿವೃದ್ಧಿ ಆಗಿರುವ ಜಾಗ ಡಿನೋಟಿಫಿಕೇಷನ್ ಮಾಡಿಸಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಿಸಿದರು.
ಸಿದ್ದರಾಮಯ್ಯ ತಾವು ಬಚಾವ್ ಆಗಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರತ್ತ ಬೊಟ್ಟು ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಯಾರ ಕಡೆಯೂ ಬೊಟ್ಟು ಮಾಡಬಾರದು. ಸಿದ್ದರಾಮಯ್ಯ ಸೇರಿದಂತೆ ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿ. ಭ್ರಷ್ಟಾಚಾರಿಗಳಿಗೆ ಪಕ್ಷ, ಜಾತಿ ಇಲ್ಲ. ಅಧಿಕಾರ ಶಾಶ್ವತವಲ್ಲ. ಸಿದ್ದರಾಮಯ್ಯ ಕ್ಲೀನ್ ಆಗಿ ಹೋಗುತ್ತಾರೊ, ಭ್ರಷ್ಟರಾಗಿ ಹೋಗುತ್ತಾರೋ ನಿರ್ಧರಿಸಲಿ ಎಂದರು.
ನಾವು ಮುಡಾ, ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಗಳ ವಿರುದ್ಧ ಪಾದಯಾತ್ರೆ ಆರಂಭಿಸಿದ್ದೇವೆ. ಇದೊಂದು ಜನಾಂದೋಲನ ರೀತಿ ಮಾರ್ಪಟ್ಟಿದೆ. ಇದನ್ನು ಕಂಡು ಕಾಂಗ್ರೆಸ್ ಸರ್ಕಾರ ಭೀತಿಗೊಂಡಿದೆ ಎಂದರು.
ನಿಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಪ್ರತಿಪಕ್ಷಗಳ ಆರೋಪಕ್ಕೆ ಸದನದಲ್ಲಿ ಉತ್ತರ ನೀಡಬೇಕಿತ್ತು. ನೀವು ನಮ್ಮ ಪ್ರಶ್ನೆ ಮತ್ತು ಆರೋಪಗಳನ್ನು ಕೇಳಲು ಸಿದ್ಧರಿರಲಿಲ್ಲ. ಇದೀಗ ಸದನದಿಂದ ಹೊರ ಬಂದು ಜನಾಂದೋಲ ಮಾಡುತ್ತಿದ್ದೀರ ಎಂದು ದೂರಿದರು.
ಆರ್‌ಟಿಐ ಕಾರ್ಯಕರ್ತ ಅಬ್ರಾಹಂ ನಿಮ್ಮ ವಿರುದ್ಧ ದೂರು ನೀಡಿದ ತಕ್ಷಣ ಅವರ ಮೇಲಿನ ಪ್ರಕರಣಗಳಿಗೆ ಜೀವ ನೀಡುವ ಕೆಲಸ ಮಾಡಲಾಗಿದೆ. ಇದರಿಂದ ನೀವು ಹೆದರಿರುವುದು ಗೊತ್ತಾಗಿದೆ ಎಂದು ಜರಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಎಲ್.ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಎಂ.ಜಿ.ಮಹೇಶ್, ಫಣೀಶ್, ದಯಾನಂದ ಪಟೇಲ್, ಕೇಬಲ್ ಮಹೇಶ್ ಇತರರಿದ್ದರು.