ಸಚಿವನಿಂದ ರಾಜೀನಾಮೆ ಪಡೆಯಲಿ ಸಿಎಂ

Prasanna kumar
ಪ್ರಸನ್ನಕುಮಾರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ
Published on

ಶಿವಮೊಗ್ಗ: ಅಂದು ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರನ್ನು ಡೆತ್‌ನೋಟ್ ಆಧಾರದಲ್ಲಿ ರಾಜೀನಾಮೆ ನೀಡುವಂತೆ ಅಂದಿನ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದರು. ಈಗ ಅವರದೇ ಸರ್ಕಾರದ ಸಚಿವರೊಬ್ಬರ ಹೆಸರು ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವುದರಿಂದ ಅವರಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಡೆಯಲಿ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್‌ನೋಟ್‌ನಲ್ಲಿ ಕೆ.ಎಸ್.ಈಶ್ವರಪ್ಪ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಿದ್ದರಾಮಯ್ಯ ಹೋರಾಟ ನಡೆಸಿ ಈಶ್ವರಪ್ಪ ರಾಜೀನಾಮೆಗೆ ಕಾರಣರಾಗಿದ್ದರು. ಈಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆ ಇಲಾಖೆ ಸಚಿವರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಸಂಬಂಧಿಸಿದ ಸಚಿವರು ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಇಲ್ಲದೇ ಇದ್ದಾಗ ಒಂದು ನಡೆ. ಅಧಿಕಾರ ಸಿಕ್ಕ ಬಳಿಕ ವರ್ತನೆಯೇ ಬೇರೆ. ಇದು ಕಾಂಗ್ರೆಸ್ ವಿಶೇಷತೆ. ಕಾಂಗ್ರೆಸ್ ಅಧಿಕಾರದಲ್ಲಿ ಅಧೀಕ್ಷಕ ಹುದ್ದೆಯಲ್ಲಿದ್ದವರೇ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶವಿದ್ದರೆ ಸಾಮಾನ್ಯ ಸಿಬ್ಬಂದಿ ಪಾಡೇನು ಎಂದು ಪ್ರಶ್ನಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಆ ಇಲಾಖೆಯ ಸಚಿವರೇ ಮೌಖಿಕವಾಗಿ ಸೂಚನೆ ನೀಡಿದ್ದರು ಎಂದು ಚಂದ್ರಶೇಖರನ್ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆ ಇಲಾಖೆ ಸಚಿವರು ತನಿಖೆ ಎದುರಿಸಲೇಬೇಕು. ಈ ಪ್ರಕರಣದ ಬಗ್ಗೆ ಗಂಭೀರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅತ್ಯಾಚಾರ, ಗ್ಯಾಂಗ್‌ವಾರ್, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸ್ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಲು ಸಿದ್ಧರಿದ್ದರೂ ಸರ್ಕಾರ ಅದಕ್ಕೆ ಅವಕಾಶ ನೀಡುತ್ತಿಲ್ಲ. ಯಾವುದೇ ಪ್ರಕರಣ ನಡೆದರೂ ಅದನ್ನು ಸಿಎಂ ಸಿದ್ದರಾಮಯ್ಯ ರಾಜಕೀಯ ದೃಷ್ಟಿಯಿಂದಲೇ ನೋಡುತ್ತಾರೆ ಎಂದು ಕೆ.ಬಿ.ಪ್ರಸನ್ನಕುಮಾರ್ ದೂರಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ನಗರಾಧ್ಯಕ್ಷ ದೀಪಕ್ ಸಿಂಗ್, ಪಾಲಿಕೆ ಸದಸ್ಯ ಮಂಜುನಾಥ್, ಪ್ರಮುಖರಾದ ಸಿದ್ದಪ್ಪ, ತ್ಯಾಗರಾಜ್, ಗಂಧದಮನೆ ನರಸಿಂಹಮೂರ್ತಿ, ಕೆ.ಎನ್.ರಾಮಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net