ಸಿಎಂ ಕ್ಷಮೆಯಾಚಿಸಲಿ

Let the CM apologize.
ಬೆಳಗಾವಿಯ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಎಎಸ್‌ಪಿ ಜೊತೆಗಿನ ವರ್ತನೆ ಖಂಡಿಸಿ ವಿಜಯಪುರದಲ್ಲಿ ಜಿಲ್ಲಾ ಯುವ ಪರಿಷತ್‌ನ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ. ಭುಬಾಲನ್ ಅವರಿಗೆ ಮನವಿ ಸಲ್ಲಿಸಿದರು. ಶರಣು ಸಬರದ, ರವಿ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ : ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯನವರು ಧಾರವಾಡದ ಎಎಸ್‌ಪಿ ಜೊತೆಗೆ ಅಸಭ್ಯ ವರ್ತನೆ ನಡೆಸಿದ್ದು, ಸಿಎಂ ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಜಿಲ್ಲಾ ಯುವ ಪರಿಷತ್ ವತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪರಿಷತ್ ಅಧ್ಯಕ್ಷ ಶರಣು ಸಬರದ ಮಾತನಾಡಿ, ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಕೈ ಪಕ್ಷದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಎಎಸ್‌ಪಿ ನಾರಾಯಣ ಭರಮನಿ ಜೊತೆಗೆ ನಡೆದುಕೊಂಡ ರೀತಿ ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ. ಇಂತಹ ಘಟನೆಯಿಂದಾಗಿ ಅಧಿಕಾರಿಗೆ ಆಗುವ ಮಾನಸಿಕ ಹಿಂಸೆ ಅಷ್ಟಿಷ್ಟಲ್ಲ. ಕುಟುಂಬದ ಜವಾಬ್ದಾರಿ ಲೆಕ್ಕಿಸದೆ ಪೊಲೀಸ್ ವೃಂದದವರು ಎಲ್ಲ ರೀತಿಯ ಸೇವೆಗೆ ಕಂಕಣ ಬದ್ಧರಾಗಿ ಕಾರ್ಯ ನಿರ್ವಹಿಸುತ್ತಾರೆ. ರಾಜಕಾರಣಿಗಳ ದುರ್ವರ್ತನೆಯಿಂದ ಪೊಲೀಸ್ ಇಲಾಖೆಯವರು ಆತ್ಮಸ್ಥೈರ್ಯ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾಯವಾದಿ ಸಂಗಮೇಶ ಹೌದೆ ಮಾತನಾಡಿ, ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಗೌರವ ಕೊಡುವಲ್ಲಿ ಮುಖ್ಯಮಂತ್ರಿಗಳು ದಾರಿ ತಪ್ಪುತ್ತಿದ್ದಾರೆ. ಮುಖ್ಯಮಂತ್ರಿಗಳು ಸಂಯಮ ಕಾಯ್ದುಕೊಂಡು ವರ್ತಿಸಬೇಕು. ಘಟನೆ ಬಗ್ಗೆ ಕೂಡಲೇ ಸಿಎಂ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಶಿವಾನಂದ ಭುಯ್ಯರ, ರವಿ ಬಿರಾದಾರ (ನಾಗಠಾಣ), ಮಹೇಶ ಬಿದನೂರ, ಬಾಪುಗೌಡ ಬಿರಾದಾರ, ಬಾಬು ಹಿಪ್ಪರಗಿ, ಆಕಾಶ ಸಬರದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net