ಆಯ್ಕೆಯಾದವರು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಲಿ

VISHWAKARMA SANMAN
Published on

ಹಿರೇಕೆರೂರ: ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಮೂಲಕ ವಿಶ್ವಕರ್ಮ ಸಮಾಜವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನೂತನ ತಾಲೂಕು ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು ನಿಮಗೆ ದೊರೆತಿರುವ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಾಲೂಕು ಲಯನ್ಸ್ ಕ್ಲಬ್ ಪರಿವಾರ ಅಧ್ಯಕ್ಷ ಪ್ರಕಾಶಗೌಡ ಗೌಡರ ಹೇಳಿದರು.

ತಾಲೂಕು ವಿಶ್ವಕರ್ಮ ಸಮಾಜಕ್ಕೆ ನೂತನ ಅಧ್ಯಕ್ಷ ದೇವೇಂದ್ರ ಬಡಿಗೇರ, ಉಪಾಧ್ಯಕ್ಷ ಪ್ರಕಾಶ ನಿಟ್ಟೂರ ಮತ್ತು ಪದಾಧಿಕಾರಿಗಳಾಗಿ ಆಯ್ಕೆಗೊಂಡವರಿಗೆ ಗೆಳೆಯರ ಬಳಗದ ವತಿಯಿಂದ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಗುರುವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವಕರ್ಮರು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸದೇ ಇದ್ದಿದ್ದರೆ ನಮ್ಮ ನಾಡಿನ ಭವ್ಯ ಇತಿಹಾಸ, ಪರಂಪರೆ, ಎಲ್ಲವೂ ಮರೀಚಿಕೆಯಾಗುತ್ತಿದ್ದವು. ಅಂದಿನಿಂದ ಇಂದಿನವರೆಗೆ ವಿಶ್ವಕರ್ಮ ಸಮಾಜದವರು ಕರಕುಶಲ, ಮೂರ್ತಿ ಕೆತ್ತನೆ, ಮಣ್ಣಿನ ಮತ್ತು ಮರಗಳ ವಿಗ್ರಹ ತಯಾರಿ, ಹೀಗೆ ಒಂದಿಲ್ಲೊಂದು ಕೆತ್ತನೆ, ಬಡಿಗತನದ ಕೆಲಸಗಳಿಗೆ ಹೆಸರುವಾಸಿಯಾಗಿದೆ. ಅತ್ಯಾಧುನಿಕ ಯಂತ್ರ ಮತ್ತು ಆಧುನಿಕ ತಂತ್ರಜ್ಞಾನಗಳಿಂದ ಅವರ ಸಮಾಜದ ಬಹಳಷ್ಟು ಜನರಿಗೆ ಉದ್ಯೋಗವಿಲ್ಲದೆ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದರು.

ಬಸವರಾಜ ಅರಕೇರಿ ಮಾತನಾಡಿ, ವಿಶ್ವಕರ್ಮ ಸಮಾಜದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ದೊರಕಿಸಬೇಕು. ಈ ಸಮಾಜ ಮುಖ್ಯವಾಹಿನಿಗೆ ಬರಲು ನೂತನ ಪದಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದರು.

ಮದ್ವೀರಶೈವ ಸಮಾಜದ ಯುವ ಘಟಕದ ಅಧ್ಯಕ್ಷ ರುದ್ರೇಶ ಬೇತೂರ, ಶಿವಕುಮಾರ ಪ್ಯಾಟೇರ, ಅನಿಲ ಪಾಟೀಲ, ಜಗದೀಶ ದೊಡ್ಡಗೌಡರ, ಮನೋಹರ ವಡ್ಡಿನಕಟ್ಟಿ, ಲೋಕೇಶ ಕಮಡೊಳ್ಳಿ, ಕಿಟ್ಟಿ ಚಿಂದಿ, ರಾಜು ಬಣಕಾರ, ಪ್ರವೀಣ ಮತ್ತಳ್ಳಿ, ಎಂ.ಎಂ. ಮತ್ತೂರ ಹಾಗೂ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು, ಸಮಾಜದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net