

ಸಂಶಿ: ಮಕ್ಕಳ ಮನಸು ಭೂಮಿ ತಾಯಿಯಿದ್ದಂತೆ. ಅದರಲ್ಲಿ ಯಾವ ರೀತಿ ಸಂಸ್ಕೃತಿ, ಆಚಾರ-ವಿಚಾರ ಬದುಕು ಕಟ್ಟಿಕೊಂಡು ಸನ್ಮಾರ್ಗ ತೋರಿದಲ್ಲಿ ಅದು ಒಳ್ಳೆಯ ಫಲವನ್ನೇ ನೀಡುತ್ತದೆ ಎಂದು ಕರಾಮಸಾಪ ತಾಲೂಕಾಧ್ಯಕ್ಷ ಲೋಕೇಶ ಸರಾವರಿ ಹೇಳಿದರು.
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕುಂದಗೋಳ ವತಿಯಿಂದ ಗ್ರಾಮದ ನೀಲಮ್ಮ ಅಕ್ಕಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪಾಲಕರು ಹಾಗೂ ಕಲಿಸಿದ ಗುರುಗಳು ಹೆಮ್ಮೆ ಪಡುವಂತೆ ಭವಿಷ್ಯ ರೂಪಿಸಿಕೊಳ್ಳಬೇಕು. ಆ ಮೂಲಕ ಸಮಾಜಕ್ಕೆ ಜ್ಯೋತಿಯಾಗಿ ಬೆಳಗಬೇಕು ಎಂದರು.
ಎನ್.ಎಫ್. ನದಾಫ್ ಮಾತನಾಡಿ, ಯಾವುದೇ ಶಾಲೆ ಬೆಳೆಯಬೇಕಾದರೆ ಮಕ್ಕಳು ಶಿಕ್ಷಕರು ಹಾಗೂ ಪಾಲಕರ ಸಹಕಾರ ಅತ್ಯವಶ್ಯಕ. ಶಾಲೆಯ ಶಿಕ್ಷಣದ ಉನ್ನತೀಕರಣಕಾಗಿ ಮಕ್ಕಳು ಕೂಡ ಹೋರಾಟ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಸತ್ಸಮಾಜ ಸೃಷ್ಟಿಯಾಗುತ್ತದೆ ಎಂದರು.
ಭೂ ದಾನಿ ವಿ.ಡಿ. ಅಕ್ಕಿ, ಗ್ರಾಪಂ ಅಧ್ಯಕ್ಷ ರಾಜು ಪುಟ್ಟಣ್ಣವರ, ಶಿವಾನಂದ ಪೂಜಾರ, ಪೊ› ರಮೇಶ ಅತ್ತಿಗೇರಿ, ಮಂಜು ಕಟಗಿ, ಸಿದ್ದರಾಮಪ್ಪ ಪಾಳೇದ, ಗೌರವ್ವ ಹರಕುಣಿ, ಪರಶುರಾಮ ಮಾಯಣ್ಣವರ, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.