

ಸವದತ್ತಿ: ಎಲ್ಲ ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಕರೀಕಟ್ಟಿ ರಸ್ತೆಯಲ್ಲಿರುವ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲೂಕಾಡಳಿತ ಮತ್ತು ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಸಾಕಷ್ಟು ಶಾಲೆಗಳು ದುರಸ್ತಿಯಾಗಬೇಕಿವೆ. ಶಿಥಿಲಾವಸ್ಥೆಯಲ್ಲಿರುವ 200 ಶಾಲೆಗಳ ದುರಸ್ತಿಗಾಗಿ ಪ್ರತಿ ಶಾಲೆಗೆ 2 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಕೆಲವು ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ನಿವಾರಣೆಗಾಗಿ ಪ್ರತಿ ಶಾಲೆಗೂ ಆರ್‌ಒ ಪ್ಲಾಂಟ್ ಅಳವಡಿಸಲಾಗುವುದು ಎಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಸ್ಪರ್ಧಾಯುಗದಲ್ಲಿ ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದರು. ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ಶಿಕ್ಷಕರ ಸಂಘಗಳ ಪರಿಷತ್ತಿನ ಅಧ್ಯಕ್ಷ ಸಂಗಮೇಶ ಖನ್ನಿನಾಯ್ಕರ, ಪುರಸಭೆ ಅಧ್ಯಕ್ಷೆ ಚನ್ನವ್ವ ಹುಚ್ಚಣ್ಣವರ, ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಉಪಾಧ್ಯಕ್ಷ ಮಾರುತಿ ಬಸಲಿಗುಂದಿ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಕುರಿ ಇತರರು ಇದ್ದರು.